ಮೈಸೂರು: ಪ್ರಧಾನಿ ಮೋದಿಯವರ ಸಹೋದರನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಳೆದ ರಾತ್ರಿ ಮೈಸೂರು ಸಮೀಪ ಅಪಘಾತಕ್ಕೊಳಗಾಗಿತ್ತು. ಈ ಘಟನೆಯ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಗಾಯಗೊಂಡ ಎಲ್ಲ ಐವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಚಾಲಕ ನಿದ್ರೆ ಮಂಪರಿನಲ್ಲಿದ್ದರಿಂದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗುವಿಗೆ ಸ್ವಲ್ಪ ಜಾಸ್ತಿ ಪೆಟ್ಟು ಬಿದ್ದಿದೆ ಎಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ನಂತರ ಪ್ರತಾಪ್ ಸಿಂಹ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಅವರ ಸಹೋದರನ ಸೊಸೆಯ ಮುಖದ ಒಂದು ಭಾಗದ ನರಕ್ಕೆ ತೊಂದರೆಯಾಗಿದೆ. ಮೊಮ್ಮಗನ ಕಾಲಿನ ಮಂಡಿಗೆ ಗಾಯವಾಗಿದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಸುತ್ತೂರು ಶ್ರೀಗಳ ಪ್ರತಿಕ್ರಿಯೆ: ಅಪಘಾತವಾದ ಶಾಕ್ನಿಂದ ಎಲ್ಲರೂ ಹೊರಬಂದಿದ್ದಾರೆ. ಮೊಮ್ಮಗು ಕೂಡ ನಮ್ಮ ಜೊತೆ ಮಾತನಾಡಿದೆ. ಅವರನ್ನು ವಾರ್ಡ್ಗೆ ಶಿಫ್ಟ್ ಮಾಡ್ತಾರೆ. ಸ್ವಲ್ಪ ದಿನ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ಚಾಲಕ ಕೂಡ ಆರಾಮ್ ಆಗಿದ್ದಾರೆ. ಆತನಿಗೆ ಸ್ವಲ್ಪ ನಿದ್ದೆ ಬಂದ ಹಾಗಿದೆ. ಎಚ್ಚರದಿಂದ ಇರಬೇಕು ಅನ್ನುವಷ್ಟರಲ್ಲಿ ಅಪಘಾತವಾಯಿತೆಂದು ಚಾಲಕ ಹೇಳಿದ ಎಂದು ಗಾಯಾಳುಗಳನ್ನು ಮಾತನಾಡಿಸಿಕೊಂಡು ಬಂದ ನಂತರ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶಾಸಕ ರಾಮದಾಸ್ ಹೇಳಿಕೆ: ಇದೊಂದು ಅನಿರೀಕ್ಷಿತ ಘಟನೆ. ಸ್ವಲ್ಪ ದಿನ ಎಲ್ಲರೂ ಚಿಕಿತ್ಸೆ ಪಡೆದು ಮುಂದಿನ ಪ್ರಯಾಣ ಮಾಡಬಹುದು. ಯಾರ ಆರೋಗ್ಯದಲ್ಲೂ ಏನೂ ತೊಂದರೆ ಇಲ್ಲ. ಸಿಎಂ, ದೆಹಲಿ, ಅಹಮಾದಬಾದ್ಗೆ ನಿರಂತರವಾಗಿ ಮಾಹಿತಿ ಕಳುಹಿಸುವ ಕೆಲಸವಾಗುತ್ತಿದೆ. ಎರಡು ವಾಹನದಲ್ಲಿ ಸಫಾರಿ ನೋಡಲೆಂದು ಬರುತ್ತಿದ್ದರು ಎಂದು ರಾಮದಾಸ್ ತಿಳಿಸಿದರು.
ಇದನ್ನೂ ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ