ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರ್ಯಾಯ ನಾಯಕರಿದ್ದಾರೆ ಎಂಬ ಹೇಳಿಕೆ ನೀಡಿರುವುದು ದೊಡ್ಡ ಮಾತು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಪರ್ಯಾಯ ನಾಯಕ ಇಲ್ಲ ಎಂಬುದು ಸುಳ್ಳು ಎಂಬ ಹೇಳಿಕೆ ಸ್ವಾಗತಾರ್ಹ. ಬಿಜೆಪಿ ಬಲಗೊಳ್ಳುವಲ್ಲಿ ಬಿಎಸ್‌ವೈ ಶ್ರಮ ಇದೆ. ರಾಜ್ಯದ ಆಡಳಿತ, ಜನರ ಅಭಿವೃದ್ಧಿ ಹಿತದೃಷ್ಟಿಯಿಂದ ಹೈಕಮಾಂಡ್ ಮಾತು ಮೀರಲ್ಲ ಎಂಬ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದರು.
ಸಿಎಂ ಹೇಳಿಕೆ ನಿರೀಕ್ಷಿತ, ಇದು ಬಹಳಷ್ಟು ದಿನದಿಂದ ನಡೆಯುತ್ತಿತ್ತು. ಅದಕ್ಕಾಗಿಯೇ ಬೊಮ್ಮಾಯಿ, ವಿಜಯೇಂದ್ರ ದೆಹಲಿಗೆ ಹೋಗಿದ್ದರು. ಆರೆಸ್ಸೆಸ್ ಕೂಡ ಬಿಎಸ್‌ವೈ ಮನವೊಲಿಸಿದೆ ಎಂದು ತಿಳಿಸಿದರು.
ಇದು ವಯಸ್ಸಿನ ಕಾರಣಕ್ಕೆ ಬದಲಾವಣೆ. ಬಿಜೆಪಿ ವಯಸ್ಸಿನ ಲಕ್ಷ್ಮಣರೇಖೆ ವಿಧಿಸಿಕೊಂಡಿದೆ. ಇದು ಅಡ್ವಾಣಿ, ಜೋಶಿ ಎಲ್ಲರಿಗೂ ಅನ್ವಯ ಆಗುತ್ತದೆ. ಆದರೆ, ಬಿಎಸ್‌ವೈಗೆ ಪಕ್ಷ ವಿಶೇಷವಾಗಿ ಆದ್ಯತೆ ಕೊಟ್ಟಿತ್ತು. ಸಿಎಂ ಪಕ್ಷವನ್ನು ಬಲಪಡಿಸುವ, ಎಲ್ಲರನ್ನು ಒಗ್ಗಟ್ಟುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಅಪ್ರಾಮಾಣಿಕ ಎಂದು ಹೇಳುತ್ತಿದ್ದರು. ಅವರ ಮೇಲಿನ ವಿಶ್ಚಾಸಕ್ಕೆ ನಾವೆಲ್ಲ ಬಿಜೆಪಿಗೆ ಹೋದ್ವಿ. ಈಗ ವಯಸ್ಸಿನ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಹೈಕಮಾಂಡ್ ಸೂಚನೆಯನ್ನು ಪಾಲಿಸುವುದು ನಾಯಕರ ಕರ್ತವ್ಯ ಎಂದು ಹೇಳಿದರು.
ರಾಜೀನಾಮೆ ಕೊಟ್ಟರು, ತೆಗೆದುಕೊಂಡರು ಎನ್ನುವುದಕ್ಕಿಂತ ಹೈಕಮಾಂಡ್ ತೀರ್ಮಾನ ಮುಖ್ಯ. ಎಲ್ಲರನ್ನು ಪ್ರೀತಿಸುವ, ಒಟ್ಟಿಗೆ ಕೊಂಡೊಯ್ಯುವ ಸಾಮಾನ್ಯ ಜ್ಞಾನ ಇರುವ, ಕೈ, ಬಾಯಿ ಶುದ್ದಿ ಇರುವ ಬುದ್ದಿವಂತರು ಸಾಕು ರಾಜ್ಯ ಮುನ್ನಡೆಸಲು ಎಂದರು. ಒಂದೊಂದು ನಾಯಕತ್ವ ಕುಟುಂಬಗಳಿಂದಲೇ ಹೋಗಿದ್ದಾವೆ. ವಿಜಯೇಂದ್ರ ಹಸ್ತಕ್ಷೇಪ ಬಿಎಸ್‌ವೈ ಪದತ್ಯಾಗಕ್ಕೆ ಕಾರಣ ಎಂದರು.
ಡಿಸಿ ಹಾಗೂ ಪಾಲಿಕೆ ಆಯುಕ್ತೆ ವರ್ಗಾವಣೆ ವಿಚಾರ:
ಸರ್ಕಾರ ಅತ್ಯಂತ ನಾಜೂಕಾಗಿ ಸಮಸ್ಯೆ ಬಗೆಹರಿಸಿದೆ. ಇಬ್ಬರು ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ. ಆದರೆ ಇಬ್ಬರೂ ಹೊರಗೆ ಹೋಗುವಂತೆ ಮಾಡಿದವರು ನಾವುಗಳು. ಅಂದರೆ, ಜನಪ್ರತಿನಿಧಿಗಳು ಉಂಟುಮಾಡಿದ ಗೊಂದಲಗಳಿಂದಾಗಿ ಅಧಿಕಾರಿಗಳು ಹೊರಗೆ ಹೋಗುವಂತಾಯಿತು ಎಂದರು.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ: ಸಿಎಂ ಬಿಎಸ್‌ವೈ