ಮೈಸೂರು: ಜಿಜ್ಞಾಸೆ ಮತ್ತು ಕಿತ್ತಾಟದಿಂದ ಮೈಸೂರು ಜಿಲ್ಲೆಯ ಪ್ರಗತಿ ಕುಂಠಿತವಾಗುತ್ತದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಆದೇಶ ಮೀರಿ ನಡೆಯಬಾರದು ಎಂದು ಶಾಸಕ ತನ್ವೀರ್ ಸೇಠ್ ಸಲಹೆ ನೀಡಿದರು.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ವಿಚಾರದಲ್ಲಿ ಏನೇ ಅಭಿಪ್ರಾಯ ಇದ್ದರೂ, ವ್ಯವಸ್ಥೆಯ ಮೇಲೆ ಬರಬಾರದು. ಅವರು ಐಎಎಸ್, ನಾವು ಶಾಸಕರು ಅಂತ ಅಲ್ಲ. ಶಾಸಕಾಂಗ ರೂಪಿಸಿದ ಶಾಸನಗಳನ್ನ ಕಾರ್ಯರೂಪಕ್ಕೆ ತರುವುದು ಕಾರ್ಯಾಂಗದ ಕೆಲಸ. ಆದರೆ, ನಮ್ಮ ನಡೆ ನುಡಿ ಮೀರಿ ನಡೆಯಬಾರದು ಎಂದು ಹೇಳಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸರ್ಕಾರ ಶಿಷ್ಟಾಚಾರದ ನಿಯಮ ರೂಪಿಸಿದೆ. ಲೋಪವಾದಗ ಎಚ್ಚರಿಕೆ ಕೊಟ್ಟಿರುವ ಉದಾಹರಣೆಗಳಿವೆ. ಮೈಸೂರಿನಲ್ಲಿ ಶಿಷ್ಟಾಚಾರ ಉಲ್ಲಂಘನೆಯಾದಾಗ, ಸರ್ಕಾರಕ್ಕೆ ಸಾಕಷ್ಟು ಪತ್ರ ಬರೆದಿದ್ದೇನೆ ಎಂದರು.
ರೋಹಿಣಿ ಸಿಂಧೂರಿ ಅವರು ಹೋದ ಕಡೆಯಲೆಲ್ಲ ಸರ್ಕಾರ ಎದುರು ಹಾಕಿಕೊಂಡು ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಅಧಿಕಾರಿಗಳು ಸರ್ಕಾರದ ಆದೇಶಕ್ಕೂ ಬೆಲೆ ಕೊಡಬೇಕು ಎಂದು ತಿಳಿಸಿದರು.
ಆಯುಕ್ತರ ಕಚೇರಿ ಉದ್ಘಾಟನೆ ವೇಳೆ ಅವಮಾನ: ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟನೆ ವೇಳೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ನನಗೆ ಹಾಕಲಾಗಿದ್ದ ಕುರ್ಚಿಗೆ ಡಿಜಿ&ಐಜಿಪಿ ಬಂದು ಕುಳಿತರು. ಅಲ್ಲಿ ನನಗೆ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.