ಮೈಸೂರು : ಇದ್ದ ಕಾನೂನಿಗೆ ಮಸಾಲೆ ಹಚ್ಚಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಏನಿತ್ತು. ಹಾಗೂ ಈ ಸಮಯದಲ್ಲಿ ನೈಟ್ ಕರ್ಫ್ಯೂ ಅವಶ್ಯಕತೆ ಇರಲಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಮತಾಂತರ ಮಾಡುವುದಕ್ಕೆ ನಿಷೇಧ ಹಿಂದೆಯೇ ಅನುಸೂಚಿ 21 ಮತ್ತು 25 ರಲ್ಲಿ ಇದೆ. ಇರುವಂತಹ ವಿಚಾರವನ್ನು ಪದೇ ಪದೆ ಜನರ ಮುಂದೆ ತಂದು ಅವರ ಮನಸ್ಸನ್ನು ತಿರುಚುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವುದಕ್ಕೆ ಪರ ವಿರೋಧ ಎನ್ನುವುದಕ್ಕಿಂತ ಬಲವಂತವಾಗಿ, ಅಥವಾ ಆಮಿಷದಿಂದ ಮತಾಂತರ ಮಾಡುವುದಕ್ಕೆ ವಿರೋಧವಿದೆ ಎಂದರು.
ನಾನು ಸರ್ಕಾರಕ್ಕೆ ಹೇಳುವುದು ಇಷ್ಟೆ, ಮತಾಂತರ ಮಾಡುವುದು ಎಷ್ಟು ಸರಿ, ಎಷ್ಟು ತಪ್ಪು ಎಂದು ಹೇಳುತ್ತಿರೋ ಸರ್ಕಾರ, ಅದಕ್ಕಿಂತ ದೊಡ್ದ ಅಪರಾಧ ಪಕ್ಷಾಂತರ ಮಾಡುವುದು ಎಂದು ಹೇಳಿ. ನಿಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದೇ ಪಕ್ಷಾಂತರ ಮಾಡಿ. ಹಾಗಾಗಿ ನಿಮಗೆ ನೀತಿ ಪಾಠ ಹೇಳುವಂತಹ ಅರ್ಹತೆ ಇಲ್ಲ ಎಂದರು.
ಈ ಕಾನೂನಿನಲ್ಲಿ ಯಾರೂ ಬೇಕಾದರೂ ದೂರು ನೀಡಬಹುದು
ನೀವು ತಂದಿರುವ ಅಂಶಗಳು ಯಾರು ಬೇಕಾದರು ದೂರನ್ನು ನೀಡಬಹುದು, ಮತಾಂತರ ಆಗುವ ವ್ಯಕ್ತಿ 30 ದಿನಗಳ ಮುನ್ನ ಅರ್ಜಿಯನ್ನು ಹಾಕಬೇಕು. ಇಂದಿನ ವಾತಾವರಣದಲ್ಲಿ ಯಾರಾದರೂ ಅರ್ಜಿ ಹಾಕಿ ತಮ್ಮ ಗೌಪ್ಯತೆ ಬಹಿರಂಗ ಪಡಿಸಿದರೆ ಅವರು ಬದುಕುವುದು ಎಷ್ಟು ಸಾಧ್ಯ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ ಎಂದರು.
ಇವರ ಗೂಂಡಾ ವರ್ತನೆ ಮಾನವ ಕುಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಘರ್ಷಣೆಗೆ ಅವಕಾಶ ಮಾಡಿಕೊಡುತ್ತೆ. ದೂರು ಕೊಡುವಂತಹ ವ್ಯಕ್ತಿ ಸುಳ್ಳು ಹೇಳಿದರೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿಲ್ಲ. ಹಾಗಾಗಿ ಯಾರು ಏನು ಬೇಕಾದರೂ ಲಾಭ ಪಡೆಯಬಹುದು. ಲಗಾಮು ಇಲ್ಲದ ಕಾನೂನನ್ನು ತಂದಿದ್ದಾರೆ ಎಂದು ಶಾಸಕ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.
ನೆಲ- ಜಲ - ಭಾಷೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ
ನಾಡಿನ ಜಲ, ನೆಲ, ಭಾಷೆ ಇದನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಮ್ಮ ನಾಡ ಧ್ವಜವನ್ನು ಸುಟ್ಟಿರುವುದು, ಕನ್ನಡಿಗರಿಗೆ ಅಪಮಾನ ಮಾಡುವಂತ ಯಾವುದೇ ಕೃತ್ಯ ನಡೆದರು ಅದನ್ನು ಖಂಡಿಸುತ್ತೇನೆ. ಕರ್ನಾಟಕ ಬಂದ್ ಸರ್ಕಾರ ಬೆಂಬಲಿತ ಬಂದ್ ಆಗಬೇಕಿತ್ತು. ಆದರೆ, ಸರ್ಕಾರ ಇದನ್ನ ಬೆಂಬಲಿಸುತ್ತಿಲ್ಲ. ಹಾಗಾಗಿ ನಾನು ಕನ್ನಡ ಪರ ಸಂಘಟನೆಗಳು ಕರೆದಿರುವ ಬಂದ್ ಗೆ ಬೆಂಬಲ ನೀಡುತ್ತೇನೆ ಎಂದರು.
ನೈಟ್ ಕರ್ಫ್ಯೂ ಹೇರಿರುವುದು ಸರಿಯಲ್ಲ :
ಹೊಸ ವರ್ಷಕ್ಕೆ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಹೇರಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗಿದೆ. ಜನರ ಸ್ವಾತಂತ್ರ್ಯಕ್ಕೆ ನಿರ್ಬಂಧ ಹಾಕುತ್ತಾ ಇದ್ದೇವೆ. ಹಾಗಾಗಿ ನಿರ್ಬಂಧ ಎಲ್ಲಿ ಹೇಗೆ ಇರಬೇಕೋ ಅಲ್ಲಿ ಇದ್ದರೆ ಸರಿ. ಚುನಾವಣ ರ‍್ಯಾಲಿಗಳಿಗೆ ರಾಜಕೀಯ ಸಮಾರಂಭಗಳಿಗೆ ಅವಕಾಶ ಮಾಡಿಕೊಡುತ್ತಾರೆ. ಆದರೆ, ಜನರು ಹೊಸ ವರ್ಷ ಆಚರಿಸಲು ನಿರ್ಬಂಧ ಹಾಕಿ ಎಲ್ಲರನ್ನೂ ಬೇರ್ಪಡಿಸುವಂತಹ ಕೃತ್ಯ ಮತ್ತು ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.