ಮೈಸೂರು: ಸಚಿವರು ಸೂಚನೆ ನೀಡಿದ ಕಾರಣಕ್ಕೆ ನಾನು ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇದು ನನಗೆ ಬಂದ ಅಧಿಕಾರ ಅಲ್ಲ, ನನ್ನ ಜಿಲ್ಲೆಯ ಕರ್ತವ್ಯ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.
ಮೈಸೂರಿನಲ್ಲಿ 16 ಕೋವಿಡ್ ಸೆಂಟರುಗಳನ್ನು ಮುಚ್ಚಲು ಅನುಮತಿ ನೀಡಲಾಗಿದೆ ಎಂಬ ಶಾಸಕ ಸಾ.ರಾ. ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ. ರಾಮದಾಸ್, ಒಂದು ವಾರದ ಹಿಂದೆಯೇ ಅವ್ಯವಸ್ಥೆ ಬಗ್ಗೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೂಚನೆ ನೀಡಲಾಗಿತ್ತು. ಇದನ್ನ ಗಮನಿಸಿ ಖುದ್ದು ನಾನೇ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದೆ. ಈ ವೇಳೆ ಸಾಕಷ್ಟು ಲೋಪದೋಷ ಕಂಡು ಬಂತು. ಆಸ್ಪತ್ರೆಯಿಂದ ಬಂದ ಕೆಲವೇ ಕ್ಷಣದಲ್ಲಿ ಕರೆ ಬಂತು. ನಂತರ ಎಲ್ಲರೂ ಸರಿಯಾದ ಮಾಹಿತಿ ಕೊಟ್ಟರು. ನಮ್ಮ ಉದ್ದೇಶ ಬಡ ಜನರಿಗೆ ಸರಿಯಾದ ಚಿಕಿತ್ಸೆ ಸಿಗುವುದು. ಅದು ಸರ್ಕಾರಿ ಕೋಟಾದ ದುರ್ಬಳಕೆ ಆಗಬಾರದೆಂಬುದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಕೋವಿಡ್ ಕೇರ್ ಸೆಂಟರ್‌ಗಳ ಅನುಮತಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಮದಾಸ್, ಖಾಸಗಿ ಆಸ್ಪತ್ರೆಗಳು ಹಣ ಮಾಡುವ ದಂಧೆಗಾಗಿ ಕೇರ್ ಸೆಂಟರ್ ನಡೆಸುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು ನಿಜ. ನಾನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಧರಿಸುತ್ತಿಲ್ಲ. ಇರುವ ಒಂದೇ ಲಿಫ್ಟ್ನಲ್ಲಿ ರೋಗಿಗಳು, ಹೆಲ್ತ್ ವರ್ಕರ್, ಜನ ಸಾಮಾನ್ಯರು ಓಡಾಡಬೇಕು. ಇಂತಹ ಅವ್ಯವಸ್ಥೆ ತಪ್ಪಿಸಬೇಕು ಅನ್ನೋದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.