ಮೈಸೂರು: ನಾನು ಜೆಡಿಎಸ್‌ನಲ್ಲಿರಬೇಕೋ, ಬೇಡವೋ ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕುಂಬಾರಕೊಪ್ಪಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಹೇಳಿದ ಮಾತು ಕೇಳುತ್ತೇನೆ. ಕುಮಾರಸ್ವಾಮಿಯವರಿಗೆ ಯಾವುದೇ ಅಭಿಪ್ರಾಯವಿದ್ದರೂ ನನ್ನ ನಿರ್ಧಾರ ಬದಲಾಗುವುದಿಲ್ಲ. ನಾನು ಎಲ್ಲಿರಬೇಕೆಂದು ಜನ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನಿಸಲಿಲ್ಲ. ನಾನು ಬೆಳವಾಡಿ ಚಾಮುಂಡೇಶ್ವರಿ ದೇವಾಲಯಕ್ಕೆ ಹಣ ನೀಡಿದ್ದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರೇ ಹಾಕಿಲ್ಲ. ಅದೇ ರೀತಿ ರಮ್ಮನಹಳ್ಳಿಗೂ ಆಹ್ವಾನಿಸಲಿಲ್ಲ. ಇದೀಗ ಕ್ಷೇತ್ರದಲ್ಲಿ ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದೆ. ಅದಕ್ಕೆ ಸಿದ್ದರಾಮಯ್ಯ ಬರುತ್ತಿದ್ದಾರೆ. ಸ್ಥಳೀಯ ಶಾಸಕನಾಗಿ ನಾನು ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದ ಜನರು ಕರೆದಾಗ ನಾನು ಹೋಗಲೇಬೇಕು. ಈ ಹಿಂದೆ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ಆದರೆ ನಾನು ಪಕ್ಷ ಸೇರುವುದು, ಬಿಡುವುದು ಎಲ್ಲವೂ ಜನರಿಗೆ ಬಿಟ್ಟಿದ್ದು.
ನಾನು ಈ ಬಗ್ಗೆ ಕ್ಷೇತ್ರದ ಜನರ ಬಳಿ ಅಭಿಪ್ರಾಯ ಕೇಳಿಲ್ಲ.ಇನ್ನು ಚುನಾವಣೆಗೆ ಸಾಕಷ್ಟು ಸಮಯ ಇದೆ. ಎಲ್ಲವೂ ಮತದಾರ ತೀರ್ಮಾನದಂತೆ ನಡೆಯುತ್ತದೆ ಎಂದರು.
ಇದನ್ನೂ ಓದಿ: ನಾಳೆಯಿಂದಲೇ ಹೋಟೆಲ್ ಗ್ರಾಹಕರ ಜೇಬಿಗೆ ಕತ್ತರಿ: ಊಟ-ತಿಂಡಿ ಬೆಲೆ 10 ರೂ. ಹೆಚ್ಚಳ