ಮೈಸೂರು: ಪಕ್ಷಕ್ಕಾಗಿ ದುಡಿದಿರುವ ಮೈಸೂರಿನವರಿಗೆ ಸಚಿವ ಸ್ಥಾನ ಅಗತ್ಯವಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಭಾಗದ ನಾಯಕರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರು ವಿವಿಯ ವಿಜ್ಞಾನಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಚಿವ ಸ್ಥಾನ ನೀಡುವ ಪಟ್ಟಿ ಬಿಡುಗಡೆಯಾಗಲಿದೆ. ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಪರಮಾಧಿಕಾರಕ್ಕೆ ಬಿಟ್ಟ ವಿಚಾರ. ಇನ್ನೂ ಆರು ಸಚಿವ ಸ್ಥಾನಗಳು ಖಾಲಿ ಇವೆ. ಮುಂದಿನ ದಿನಗಳಲ್ಲಿ ಯಾರಿಗೆ ಸಿಗುತ್ತವೆ ಎಂಬುದನ್ನು ಕಾದು ನೋಡೋಣವೆಂದರು.
ಶಾಲೆಗೆ ಮೊಬೈಲ್ ತರದಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಕೆಲವರಿಗೆ ರಾಜ್ಯೋತ್ಸವ ಅಂತ ಉಚ್ಛಾರಣೆ ಬರೋಲ್ಲ ಹಾಗಂತ ಮಕ್ಕಳಿಗೆ ಅಪಮಾನ ಮಾಡಬಾರದು. ಅವರನ್ನು ತಿದ್ದಿ ಕಲಿಸಬೇಕು, ಕೆಲ ಶಿಕ್ಷಕರು ತಮ್ಮಲ್ಲಿನ ಆಸಕ್ತಿ ಕೊರತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದ್ರು.
ಇನ್ನು, ಪಠ್ಯದಿಂದ ಟಿಪ್ಪು ವಿಚಾರ ಕೈಬಿಡಲು ಸಮಿತಿ ವರದಿ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕುರಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಮಕ್ಕಳಿಗೆ ಶಾಲಾ ಆರಂಭದ ದಿನಗಳಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡಲಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ರು.