ಮೈಸೂರು: ಎಪಿಎಂಪಿ ಕಾಯ್ದೆ ವಿರೋಧಿಸಿ ನೀಡಿರುವ ಕರ್ನಾಟಕ ಬಂದ್ಗೆ ರೈತರ ಬೆಂಬಲವಿಲ್ಲ. ಕೆಲ ಸಂಘಟನೆಗಳು ರೈತರ ಹೆಸರಿನಲ್ಲಿ ಬೆಂಬಲ ಸೂಚಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿದ್ದೀನಿ, ರೈತರು ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ರೈತರ ಹೆಸರಿನಲ್ಲಿ ಕೆಲ ಸಂಘಟನೆಗಳು ರಾಜಕೀಯ ಮಾಡುತ್ತಿವೆ. ಪ್ರತಿಪಕ್ಷಗಳಿಗೂ ಎಪಿಎಂಸಿ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಅವರು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಪ್ರತಿಪಕ್ಷದವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಆದರೆ, ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕಾಟಾಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ನಿಜವಾಗಿಯೂ ಸರ್ಕಾರದ ವಿರುದ್ಧ ಇದ್ದಿದ್ದರೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡುತ್ತಿದ್ದರು. ಡಿವೈಡ್ ಆ್ಯಂಡ್ ರೂಲ್ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು. ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದರು.