ಮೈಸೂರು : ಮೈಸೂರು ನಿರ್ಮಿತಿ ಕೇಂದ್ರದ ಬಳಿಯ ಭೋಗಾದಿಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಸೋಮೇಶ್ವರನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ವೇಳೆ ನಿರ್ಮಲಾನಂದನಾಥ್ ಸ್ವಾಮೀಜಿ ಮಾತನಾಡಿ, ಮೈಸೂರು ಕೊರೊನಾ ಮುಕ್ತವಾಗುವತ್ತ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾಡಾಳಿತ ಮತ್ತು ಜನಪ್ರತಿನಿಧಿಗಳ ಶ್ರಮ ಅಧಿಕವಾಗಿದೆ ಎಂದು ಎಲ್ಲರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಛತೆಗೆ ಆದ್ಯತೆ, ಜನಮಾನಸದಲ್ಲಿ ಜಾಗೃತಿ ಉಂಟುಮಾಡಬೇಕೆಂಬ ಆಶಯ ವ್ಯಕ್ತಪಡಿಸಿದರು.
ಹೊರ ಜಿಲ್ಲೆಗಳು, ದೇಶಗಳಿಂದ ಬರುತ್ತಿರುವವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದ್ದು, ಇದು ಉತ್ತಮ ಕ್ರಮ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಲಿ. ಮುಂದೆಯೂ ಕೊರೊನಾ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಸ್ವಾಮೀಜಿ ತಿಳಿಸಿದರು.
ಇನ್ನು ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹಲವು ಕಡೆ ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಆದರೆ, ಪ್ರಾಕ್ಟಿಕಲ್ ತರಗತಿಗಳು ಸದ್ಯಕ್ಕೆ ಕಷ್ಟ. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತರಗತಿಗಳನ್ನು ನಡೆಸಬಹುದು ಎಂದು ಹೇಳಿದರು.