ಮೈಸೂರು: ಮಂಗಳೂರಲ್ಲಿ ಆಟೋ ಸ್ಫೋಟದ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಮತ್ತು ನಿಗಾವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಅವರಿಗೂ ನಾನು ಸೂಚನೆ ಕೊಟ್ಟಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಮಂಗಳೂರು ಪ್ರಕರಣ ಹಿನ್ನೆಲೆ ಮೈಸೂರಿನಲ್ಲಿ ಭದ್ರತೆ ಹೇಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಈಗಾಗಲೇ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮೈಸೂರಿನಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಭೇಟಿ ಕೊಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ ವೋಟರ್ ಐಡಿ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಒಂದು ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಅವರು ಕೈಗೊಂಡಿರುವ ಪ್ರಕ್ರಿಯೆ. ಅದು ಯಾವುದೇ ಅಕ್ರಮವಿಲ್ಲದೆ ಸರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ನವರು ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸದ ಬಗ್ಗೆ ಕುಂಟು ನೆಪ ಹೇಳಿಕೊಂಡು ಚುನಾವಣೆ ವೇಳೆ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯಮಂತ್ರಿ ಸ್ಪಷ್ಟನೆ ಕೊಟ್ಟಿದ್ದಾರೆ. ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ರಾಮದಾಸ್‌ಗೆ ಬೇರೆಯವರು ಕಿರುಕುಳ ಕೊಡ್ತಾರೆ: ಮೈಸೂರಿನಲ್ಲಿ ಬಸ್ ನಿಲ್ದಾಣದ ವಿವಾದದ ವಿಚಾರವಾಗಿ ಮಾತನಾಡಿ, ನನ್ನ ಗಮನಕ್ಕೆ ಬರುವ ಮೊದಲೇ ಮುಖ್ಯಮಂತ್ರಿಗಳ ಗಮನಕ್ಕೆ, ರಾಜ್ಯಾಧ್ಯಕ್ಷರ ಗಮನಕ್ಕೂ ಈ ವಿಚಾರ ಹೋಗಿದೆ. ಮುಖ್ಯಮಂತ್ರಿಗಳು ಈಗಾಗಲೇ ತೀರ್ಮಾನವನ್ನು ತಿಳಿಸಿದ್ದಾರೆ ಎಂದರು.
ಶಾಸಕ ರಾಮದಾಸ್ ಒಬ್ಬ ಹಿರಿಯ ರಾಜಕಾರಣಿ, ಸಚಿವರಾಗಿದ್ದರು. ಅವರ ಸುದೀರ್ಘ ರಾಜಕೀಯದಲ್ಲಿ ಅವರು ಯಾರಿಗೂ ಕಿರುಕುಳ ಕೊಟ್ಟಿರುವುದನ್ನ ನಾವು ನೋಡಿಲ್ಲ. ಅವರು ಬೇರೆಯವರಿಗೆ ಕಿರುಕುಳ ಕೊಡದಿದ್ದರೆ ಅವರಿಗ್ಯಾಕೆ ಬೇರೆಯವರು ಕಿರುಕುಳ ಕೊಡ್ತಾರೆ.? ಅವರು ಮೈಸೂರಿನಲ್ಲಿ ಒಬ್ಬ ಸೀನಿಯರ್ ಲೀಡರ್ ಅವರಿಗೆ ಯಾರೂ ಕಿರುಕುಳ ಕೊಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಓದಿ: ಮಂಗಳೂರು ಬ್ಲಾಸ್ಟ್ ಪ್ರಕರಣ.. ಬೇರೆಡೆ ಹೋಗಿ ಬಾಂಬ್ ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು: ಎಡಿಜಿಪಿ ಅಲೋಕ್ ಕುಮಾರ್