ಮೈಸೂರು: ಈಗಲೂ ಸಕ್ರಿಯ ರಾಜಕಾರಣದಲ್ಲಿ ಇರುವ ವ್ಯಕ್ತಿಗಳಿಗೆ ದಸರಾ ಉದ್ಘಾಟನೆಗೆ ಅವಕಾಶವಿಲ್ಲ. ಆದರೂ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಮೈಸೂರಿನಲ್ಲಿ ಸಚಿವ ಎಸ್. ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಕಾಂಗರೂ ಜಾತಿಯ ವಲ್ಲಭಿ ಪ್ರಾಣಿಗಳನ್ನು ಕಳೆದ 1 ತಿಂಗಳ ಹಿಂದೆ ಚೆಕ್ ರಿಪಬ್ಲಿಕ್ ದೇಶದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಎರಡು ಹೆಣ್ಣು ಮತ್ತು ಒಂದು ಗಂಡು ವಲ್ಲಭಿಯನ್ನು ಕರೆತರಲಾಗಿದೆ. ಅವುಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿ, ಮಾಧ್ಯಮಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಈ ಬಾರಿ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಆಹ್ವಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು.
ನನ್ನ ಬಳಿ ಯಾವುದೇ ಮಾಹಿತಿ ಇಲ್ಲ: ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಸಕ್ರಿಯ ರಾಜಕಾರಣದಲ್ಲಿರುವ ರಾಜಕಾರಣಿಗಳನ್ನು ಉದ್ಘಾಟನೆಗೆ ಕರೆಯುವುದಿಲ್ಲ. ಜೊತೆಗೆ ಅನ್ಯ ಭಾಷೆಯ ನಟರನ್ನು ಉದ್ಘಾಟನೆಗೆ ಆಹ್ವಾನಿಸುವ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಸಚಿವರು ತಿಳಿಸಿದರು.
ಸಲಹೆಯನ್ನು ಸ್ವಾಗತ ಮಾಡುತ್ತೇನೆ: ಮಡಿಕೇರಿ ಚಲೋ ಚಳವಳಿಯನ್ನು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಎಸ್. ಎಂ ಕೃಷ್ಣ ಮಧ್ಯಸ್ಥಿಕೆ ವಹಿಸಿ ಚಳವಳಿಯನ್ನು ನಿಲ್ಲಿಸಬೇಕು ಎಂಬ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಸಲಹೆಯನ್ನು ಸ್ವಾಗತ ಮಾಡುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದ್ರು.
ನಾನು ಭಾಗವಹಿಸುತ್ತೇನೆ: ನಾಳೆ ಮೈಸೂರಿನಿಂದ ಸಾವರ್ಕರ್ ರಥ ಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದು, ಅದು ಪಕ್ಷದ ಕಾರ್ಯಕ್ರಮ. ಅದರಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.
ಹೆಚ್ಚಿನ ಭದ್ರತೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ಎಫೆಕ್ಟ್ ನಿಂದ ಸಚಿವರಿಗೆ ಕಪ್ಪು ಬಾವುಟ ಹಾಗೂ ಘೇರಾವ್ ಹಿನ್ನೆಲೆಯಲ್ಲಿ ಸಚಿವ ಎಸ್. ಟಿ ಸೋಮಶೇಖರ್ ಗೆ ಎಸಿಪಿ ನೇತೃತ್ವದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಎಸಿಪಿ ನೇತೃತ್ವದಲ್ಲಿ 10 ಕಮಾಂಡೋ ಪಡೆಗಳು, 10 ಮಂದಿ ಪೊಲೀಸರು, ಇಬ್ಬರು ಗನ್ಮ್ಯಾನ್ಗಳು, ಇನ್ಸ್ಪೆಕ್ಟರ್ಗಳು ಹಾಗೂ ಗುಪ್ತಚರ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ನೀಡಲಾಗಿದೆ.
ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಕೋರಿ ಪ್ರತಿಭಟನೆ