ಮೈಸೂರು: ಕಾಂಗ್ರೆಸ್ನವರು ಐಕ್ಯತಾ ನಡಿಗೆ ಆಯೋಜನೆ ಮಾಡುತ್ತಿದ್ದು, ಅವರದ್ದು ಯಾವ ಐಕ್ಯತೆ ನಡಿಗೆ ಎಂದು ನನಗೆ ಅರ್ಥವಾಗುತ್ತಿಲ್ಲವೆಂದು ಸಚಿವ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಳೆಯಿಂದ ಮೈಸೂರು ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ಹಾನಿಯಾಗಿದೆ ಎಂಬುದನ್ನು ತಿಳಿಯಲು ಅಧಿಕಾರಿಗಳು ಹಾಗೂ ಶಾಸಕರ ಸಭೆ ನಡೆಸಲಾಗಿದೆ. ಈ ಬಗ್ಗೆ ಚರ್ಚೆ ಮಾಡಿ, ಎಲ್ಲೆಲ್ಲಿ ಹಾನಿಯಾಗಿದೆ, ಎಲ್ಲೆಲ್ಲಿಗೆ ಭೇಟಿ ಕೊಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದರು.
ಮೈಸೂರು ದಸರಾ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡಲು ಮುಖ್ಯಮಂತ್ರಿ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ಸಮಿತಿಯನ್ನು ರಚಿಸಿದ್ದೇವೆ. ಸೋಮವಾರ ಸಭೆ ನಡೆಸಿ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಗುವುದು.
ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾ ಏರಿ ಬಂದ ಸಚಿವ ಸೋಮಶೇಖರ್
ರಾಮನಗರ ಹೆದ್ದಾರಿ ಜಲಾವೃತ ಕುರಿತು ಪ್ರತಿಕ್ರಿಯಿಸಿ, ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳೆಲ್ಲರನ್ನೂ ಕರೆದು ಸಭೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನಿನ್ನೆ ರಾಮನಗರ, ಮಂಡ್ಯ, ಮೈಸೂರು ವರ್ಚುವಲ್ ಮೂಲಕ ಚರ್ಚೆ ನಡೆಸಿದ್ದಾರೆ. ಈ ಮಾರ್ಗವಾಗಿ ಮೈಸೂರಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು. ಎರಡು ದಿನದಲ್ಲಿ ಮಳೆ ಕಡಿಮೆಯಾದರೆ ರಸ್ತೆಯಲ್ಲಿ ಹೋಗಬಹುದು ಎಂದರು.
ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ನಮಗೆ ಏನೂ ಯಾವುದೇ ಸೂಚನೆ ಬಂದಿಲ್ಲ. ಪ್ರಧಾನಿಯವರು ಸೆಪ್ಟಂಬರ್ 2ರಂದು ಮಂಗಳೂರಿಗೆ ಬರುತ್ತಿರುವುದರಿಂದ ಪಕ್ಷದ ಅಧ್ಯಕ್ಷರು ನಮಗೆ ಏನೂ ಹೇಳಿಲ್ಲ. ಪ್ರಧಾನಿಯವರು ಬಂದು ಹೋದ ಮೇಲೆ ತಿಳಿಸುತ್ತಾರೆ. ಇನ್ನೂ ಸಮಯವಿದೆ ಎಂದು ಹೇಳಿದರು.