ಮೈಸೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಮೈಸೂರು ಬಂದ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜುಲೈ 3 ರ ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಎಲ್ಲಾ ರೀತಿಯ ವ್ಯವಹಾರಗಳನ್ನು ಬಂದ್ ಮಾಡಿಸಬೇಕೆಂದು ತೀರ್ಮಾನಿಸಲಾಗಿದೆ. ಎಲ್ಲಾ ಕಡೆ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು, ಇಲ್ಲದಿದ್ದರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 200 ರೂ, ಗ್ರಾಮಾಂತರ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಅಲ್ಲದೆ 55 ವರ್ಷ ಮೇಲ್ಪಟ್ಟವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು, ನೆಗಡಿ ಇದ್ದರೆ ಅವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದು, ಅಗತ್ಯ ಬಿದ್ದರೆ ಮೈಸೂರಿನಲ್ಲೂ ಸಭೆ ನಡೆಸುತ್ತೇನೆ. ಆಶಾ ಕಾರ್ಯಕರ್ತರಿಗೆ ಸಹಾಯಧನ ನೀಡಲು ಯಾವುದೇ ತಾರತಮ್ಯ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಹಾಯಧನ ತಲುಪಲಿದೆ ಎಂದು ಹೇಳಿದರು.