ಮೈಸೂರು: ನಕಲಿ ನಂದಿನಿ ತುಪ್ಪ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಕೆಎಂಎಫ್ ಸಿಬ್ಬಂದಿ ಭಾಗಿಯಾಗಿಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಇಂದು ಮೈಸೂರಿನ ಹಾಲು ಉತ್ಪಾದಕರ ಒಕ್ಕೂಟದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಹಕಾರ ಸಚಿವರು, ನಕಲಿ ನಂದಿನಿ ತುಪ್ಪ ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ಮುಂದೆ ನಂದಿನಿ ಉತ್ಪನ್ನ ಮಳಿಗೆಗಳಲ್ಲಿ ಹಾಗು ಇತರ ನಂದಿನಿ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ನಕಲಿ ನಂದಿನಿ ಉತ್ಪನ್ನಗಳನ್ನ ಪತ್ತೆ ಹಚ್ಚಲು ಹಾಗು ನಿಗದಿತ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಯೇ? ಎಂಬುದನ್ನ ಪರೀಕ್ಷಿಸಲು 7 ಮಂದಿಯನ್ನು ಒಳಗೊಂಡ ಸಿಬ್ಬಂದಿ ತಂಡ ರಚಿಸಲಾಗಿದೆ. ರಾಜ್ಯದಲ್ಲಿ ಇರುವ 14 ಕೆಎಂಎಫ್ ಘಟಕಗಳಲ್ಲಿ ಜಾಗರೂಕ ದಳವನ್ನ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ನಕಲಿ ನಂದಿನಿ ತುಪ್ಪವನ್ನು ಕಂಡುಹಿಡಿಯಲು ಮೈಸೂರಿನಲ್ಲಿರುವ ಸಿಎಫ್ಟಿಆರ್ಐಗೆ ಕಳುಹಿಸಲಾಗಿದೆ. ಅಲ್ಲಿನ ವರದಿ ಬಂದ ನಂತರ ನಕಲಿ ತುಪ್ಪ ತಯಾರಿಕೆ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: 'ಅಶ್ವತ್ಥ್ ನಾರಾಯಣ್‌ಗೂ ರಾಮನಗರಕ್ಕೂ ಏನ್ ಸಂಬಂಧ?, ಕುಮಾರಸ್ವಾಮಿಯಾದ್ರೂ ಒಂದಷ್ಟು ಕಟ್ಟಡ ಕಟ್ಟಿದ್ದಾರೆ'