ಮೈಸೂರು: ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋ ನೋಡಿಯೂ ಇಲ್ಲ, ಕೇಳಿಯೂ ಇಲ್ಲ, ನನಗೆ ಗೊತ್ತೇ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಹೇಳಿದ್ದಾರೆ.
ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ’’ಮುಖ್ಯಮಂತ್ರಿ ಪುತ್ರ ಹಾಗೂ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವೈರಲ್ ವಿಡಿಯೋ ಬಗ್ಗೆ ಪ್ರತಿಪಕ್ಷದ ನಾಯಕರ ಟೀಕೆ, ವಿಡಿಯೋ ವೈರಲ್ ಎಂಬ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಯಾರು ಏನೇನೋ ಹೇಳಬಹುದು. ವರ್ಗಾವಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ರೀತಿ ಪ್ರಕರಣ ನಡೆದಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ‘‘ ಎಂದು ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಪ್ರತಿಕ್ರಿಯಿಸಿದರು.
ವರುಣಾ ವಿಧಾನ ಸಭಾ ಕ್ಷೇತ್ರದ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. "ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ?. ನಾನು ಯಾವುದು ನಾಲ್ಕೈದು ಕೊಟ್ಟಿದ್ದೀನೋ ಅಷ್ಟು ಮಾತ್ರ ಮಾಡಿ" ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿತ್ತು ಎಂಬ ಮಾತುಗಳಿವೆ.
ವಿಡಿಯೋ ವೈರಲ್ ಬಗ್ಗೆ ತನಿಖೆ ಆಗಬೇಕು ಆರಗ ಜ್ಞಾನೇಂದ್ರ: ಡಾ.ಯತೀಂದ್ರ ಅವರ ಯಾರ ಜೊತೆ ಮಾತನಾಡಿದ್ದಾರೆ, ಏನ್ ಮಾತನಾಡಿದ್ದಾರೆ ಎಂದು ತನಿಖೆ ಆಗಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಏನ್ ಮಾತನಾಡಿದ್ದಾರೆ, ಯಾರಿಗೆ ನಿರ್ದೇಶನ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಂದೆ ಸಿದ್ದರಾಮಯ್ಯಗೆ ಅಧಿಕಾರದ ಹಕ್ಕಿದೆ, ಅದರಲ್ಲಿ ಅವರ ಮಗ ಮೂಗು ತೋರಿಸುತ್ತಿದ್ದಾರೆ.
ಇದು ರಾಜ್ಯದ ಜನರ ಅರಿವಿಗೆ ಬರಬೇಕಾಗುತ್ತದೆ. ಈ ಕುರಿತು ತನಿಖೆ ನಡೆಸಬೇಕಿದೆ. ಏನಾಗಿದೆ ಎಂಬುದನ್ನು ಸಿದ್ದರಾಮಯ್ಯ ಜನತೆಗೆ ತಿಳಿಸಬೇಕಾಗುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ಒಂದು ರೂಪಾಯಿ ಕೊಡಲಿಲ್ಲ. 136 ಸೀಟು ಬಂದಿದೆ ಎಂಬ ಕಾರಣಕ್ಕೆ ನಮ್ಮದೇ ನಡೆಯುತ್ತದೆ ಎಂದು ನಡೆಸಿದರೆ ಖಂಡಿತ ನಡೆಯುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು (ಎನ್.ಎಂ.ಕೆ.ಎ ಬಾಲಬೋಧಿನಿ) ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮುನ್ನ ಸುಮಾರು 80 ವರ್ಷಗಳ ಹಿಂದೆ ನವಾಬ್ ಮೀರ್ ಕಮಲುದ್ದೀನ್ ಅಲಿಖಾನ್ ಅವರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಶಾಲೆಗಾಗಿ ಉಚಿತವಾಗಿ ಜಾಗ ನೀಡಿರುವ ಅವರ ಉದಾರವಾದ ಮನಸ್ಸನ್ನು ನಾವು ಸ್ಮರಿಸಬೇಕು. ಅದರಂತೆ ಮೇಯರ್ ಶಿವಕುಮಾರ್ ತಾವು ಓದಿದ ಶಾಲೆ ಎಂಬ ಅಭಿಮಾನಕ್ಕೆ ಅತ್ಯುತ್ತವಾಗಿ ನವೀಕರಣಗೊಳಿಸಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ: ಹೆಚ್ಡಿಕೆ ಆರೋಪಕ್ಕೆ ದಾಖಲೆ ಸಮೇತ ತಿರುಗೇಟು ನೀಡಿದ ಸಿಎಂ