ಮೈಸೂರು: ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಎಂಎಲ್ಸಿ ಮಾಡುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ತೀರ್ಮಾನ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಉಪ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಈ ಬಾರಿ ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಹೈ ಕಮಾಂಡ್ ಮತ್ತು ಮುಖ್ಯಮಂತ್ರಿಗಳ ತೀರ್ಮಾನ. ನಮ್ಮ ವ್ಯಾಪ್ತಿಯಲ್ಲಿ ಬರಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮಿಡತೆ ಗಾತ್ರದ ಹುಳುವಿನ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹಾಗೂ ಕೃಷಿ ಇಲಾಖೆಯ ಸಚಿವರು ಭೇಟಿಯಾಗಿ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರಿನ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡುವುದನ್ನು ವಿರೋಧ ಪಕ್ಷದವರು ವಿರೋಧಿಸಿರುವುದು ಸರಿಯಲ್ಲ. ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ಯಾವುದೇ ಪಕ್ಷ ಇರುವುದಿಲ್ಲ. ಅವರ ಹೆಸರನ್ನು ಇಡುವುದಕ್ಕೆ ನಾವು ಸ್ವಾಗತಿಸೋಣ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.