ಮೈಸೂರು : ಕಾಗಿನೆಲೆ ಶ್ರೀಗಳು ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡಿದ್ದು ಬಹಳ ನೋವಾಗಿದೆ. ಮುಖ್ಯಮಂತ್ರಿ ಅವರ ಈ ವರ್ತನೆ ಸರಿಯಲ್ಲ. ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳ ಬಳಿ ಈ ರೀತಿ ಮೈಕ್ ಕಿತ್ತುಕೊಂಡಿದ್ದರೆ ಬಿಡುತ್ತಿದ್ದರೇ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಗಿನೆಲೆ ಶ್ರೀಗಳು ಮಾತನಾಡುವಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡಿದ್ದು ಸರಿಯಲ್ಲ. ಮುಖ್ಯಮಂತ್ರಿಗಳ ವರ್ತನೆ ಸರಿಯಲ್ಲ ಎಂದು ಹೇಳಿದರು. ಇನ್ನು ನಿನ್ನೆ ಕಾಂಗ್ರೆಸ್ ನಾಯಕರನ್ನು ಮೈಸೂರಿನಲ್ಲಿ ಭೇಟಿಯಾದ ವಿಚಾರದ ಬಗ್ಗೆ ಬಳಿಕ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಾಹಿತಿ ಎಸ್ ಎಲ್. ಭೈರಪ್ಪ ಅವರ ಮೋದಿ ಒಲೈಕೆ ಸರಿಯಲ್ಲ: ಮೋದಿಯಿಂದ ನನಗೆ ಪ್ರಶಸ್ತಿ ಬಂದಿತು ಎಂಬ ಎಸ್ ಎಲ್. ಭೈರಪ್ಪ ಹೇಳಿಕೆ ಸರಿಯಲ್ಲ. ನಿಮ್ಮ ವಯಸ್ಸಿನಲ್ಲಿ ಈ ರೀತಿ ಒಲೈಕೆ ಮಾಡುವುದು ಸರಿ ಕಾಣಲ್ಲ. ನಿಮ್ಮ ಬರವಣಿಗೆಗೆ ಈ ಪ್ರಶಸ್ತಿ ಬಂದಿದೆ. ನಿಮ್ಮ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರವಣಿಗೆ ಆರಂಭಿಸಿದಾಗ ಮೋದಿಯವರು ಎಲ್ಲಿದ್ದರು ಎಂಬುದು ಗೊತ್ತಿಲ್ಲ ಎಂದು ವಿಶ್ವನಾಥ್ ಹೇಳಿದರು.
ಕರ್ನಾಟಕದ ಅಭಿವೃದ್ಧಿಗೆ ಎಸ್ ಎಂ. ಕೃಷ್ಣ ಕೊಡುಗೆ ಅಪಾರ: ಕರ್ನಾಟಕಕ್ಕೆ ಈ ಬಾರಿ ಎಂಟು ಜನರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಪ್ರಶಸ್ತಿ ಬಂದಿದೆ. ಇದರಲ್ಲಿ ಎಸ್ ಎಂ.ಕೃಷ್ಣ ಅವರಿಗೆ ಪದ್ಮ ವಿಭೂಷಣ ಬಂದಿದ್ದು ಸಂತೋಷವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಎಸ್ ಎಂ. ಕೃಷ್ಣ ಅವರನ್ನು ಎಚ್. ವಿಶ್ವನಾಥ್ ಹಾಡಿ ಹೊಗಳಿದರು.
ಬೆಂಗಳೂರು - ಮೈಸೂರು ಹೈವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ಇಡುವಂತೆ ಕೇಂದ್ರ ಸರ್ಕಾರಕ್ಕೆ ಎಸ್ ಎಂ.ಕೃಷ್ಣ ಸೊಗಸಾದ ಪತ್ರ ಬರೆದಿದ್ದಾರೆ. ಅವರನ್ನ ನೋಡಿ ಸಂಸದ ಪ್ರತಾಪ್ ಸಿಂಹ ಅಂತಹವರು ಕಲಿಯಬೇಕು ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹರನ್ನು ಟೀಕಿಸಿದರು.
ಡಿಕೆಶಿ ಮತ್ತು ಸುರ್ಜೇವಾಲರನ್ನು ಭೇಟಿ ಮಾಡಿದ ವಿಶ್ವನಾಥ್ : ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್ ವಿಶ್ವನಾಥ್ ಭೇಟಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲೇಬೇಕೆಂದೇನೂ ಇಲ್ಲ. ನಾನು ಸ್ವತಂತ್ರವಾಗಿರುವ ವ್ಯಕ್ತಿ ಎಂದು ಹೇಳಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತುಕತೆ ನಡೆಸಲು ಕರೆದಿದ್ದರು. ಅದಕ್ಕೆ ಬಂದು ಮಾತನಾಡಿದ್ದೇನೆ. ನಾನು ಡಿಕೆಶಿ ಬಹುಕಾಲದ ಸ್ನೇಹಿತರು. ಸುರ್ಜೇವಾಲ ಅವರ ಜೊತೆಗೂ ಮಾತುಕತೆ ನಡೆಸಿದೆ. ನನ್ನ ಅನುಭವದ ಬಗ್ಗೆ ಹಂಚಿಕೊಂಡೆ ಎಂದು ಹೇಳಿದರು. ಇನ್ನು ಸಿದ್ದರಾಮಯ್ಯರ ಮೇಲೆ ಯಾವುದೇ ಮುನಿಸು ಇಲ್ಲ. ನಾವು ವೈಯಕ್ತಿಕವಾಗಿ ಯಾವಾಗಲೂ ಚೆನ್ನಾಗಿದ್ದೇವೆ ಎಂದರು.
ಇದನ್ನೂ ಓದಿ : ಮತ್ತೆ ಕಾಂಗ್ರೆಸ್ ಗೂಡು ಸೇರಲು ಸಜ್ಜಾದ ಹಳ್ಳಿಹಕ್ಕಿ.. ಕೈ ಹಿಡಿಯುವ ಬಗ್ಗೆ ದೃಢಪಡಿಸಿದ ಹೆಚ್ ವಿಶ್ವನಾಥ್