ಮೈಸೂರು : ನಮ್ಮದು ಜನಸ್ನೇಹಿ ಸರ್ಕಾರವಾಗಿದ್ದು, ಜನತೆ ಹಾಗೂ ಕೈಗಾರಿಕೋದ್ಯಮದ ಪುನಶ್ಚೇತನಕ್ಕೆ ಪೂರಕವಾದ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಸಮ್ಮತಿ ಮೇಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ - 19 ಹಿನ್ನೆಲೆ ಜಗತ್ತಿನ ಎಲ್ಲಾ ಕೈಗಾರಿಕಾ ಕ್ಷೇತ್ರಗಳೂ ತಲ್ಲಣಗೊಂಡಿವೆ. ಕೈಗಾರಿಕಾಭಿವೃದ್ದಿಗೆ ಸಾಕಷ್ಟು ಹಿನ್ನಡೆ ಆಗಿದೆ. ಕೈಗಾರಿಕಾ ವಲಯದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವಿದ್ದು, ಕೈಗಾರಿಕೋದ್ಯಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಈ ಉದ್ದೇಶಕ್ಕಾಗಿಯೇ ಸಮ್ಮತಿ ಮೇಳ ಆಯೋಜಿಸಲಾಗಿದೆ ಎಂದರು.
ರಾಜ್ಯದಲ್ಲಿ 6 ಲಕ್ಷ ಸಣ್ಣ ಕೈಗಾರಿಕೆಗಳಿದ್ದರೂ ಸಹ, ಈವರೆಗೆ ಒಂದು ಲಕ್ಷ ಸಣ್ಣ ಕೈಗಾರಿಕೆಗಳು ಮಾತ್ರ ನೋಂದಣಿ ಮಾಡಿಸಿ ಸಮ್ಮತಿ ಪತ್ರ ಪಡೆದುಕೊಂಡಿವೆ. ಈಗಾಗಲೇ ಹಸಿರು ನ್ಯಾಯ ಪೀಠ ಇಲಾಖೆಯನ್ನು ಈ ವಿಚಾರವಾಗಿ ಪ್ರಶ್ನಿಸಿದೆ. ಆದ್ದರಿಂದ ಕಡ್ಡಾಯವಾಗಿ ಸಣ್ಣ ಕೈಗಾರಿಕೆಗಳು ನೋಂದಣಿ ಮಾಡಿಸಿ, ಸಮ್ಮತಿ ಪತ್ರ ಪಡೆದು ವ್ಯವಸ್ಥಿವಾಗಿ ನೆಲ, ಜಲ, ವಾಯು ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಓದಿ : ನದಿ ನೀರು ಮಲಿನಗೊಂಡರೆ ಅಧಿಕಾರಿಗಳೇ ಜವಾಬ್ದಾರಿ; ಸಚಿವ ಸಿ.ಪಿ. ಯೋಗೇಶ್ವರ್
ಸಣ್ಣ ಕೈಗಾರಿಕೆಗಳನ್ನು ಪರಿಸರ ವಿಜ್ಞಾನ ಇಲಾಖೆ ವ್ಯಾಪ್ತಿಯಡಿ ನೋಂದಣಿ ಮಾಡಿ ಸಮ್ಮತಿ ಪತ್ರ ನೀಡಿ ಕಾನೂನು ಕಟ್ಟಳೆಗಳು ಅರಿವು ಮೂಡಿಸಬೇಕಾಗಿದೆ. ಹಾಗಾಗಿ ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಾನು ಆದೇಶಿಸಿದ್ದೇನೆ. ಕೈಗಾರಿಕೆಗಳ ನೋಂದಣಿ ಶುಲ್ಕದ ಏರಿಕೆ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಬಂದಿವೆ. ಕೈಗಾರಿಕೆಗಳ ಬಂಡವಾಳ ಹೂಡಿಕೆ ಮೇಲೆ ಶೇ 0.2ರಷ್ಟು ಶುಲ್ಕ ವಿಧಿಸಿರುವುದು ನ್ಯಾಯ ಸಮ್ಮತವಲ್ಲವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾನು ಅಧಿಕಾರಿಗಳ ಜೊತೆ ಚರ್ಚಿಸಿ ಪರಿಷ್ಕರಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ ಗುಣಾತ್ಮಕ ಉತ್ಪಾದನೆಗೆ ಮುಂದಾಗುವ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶ ನಮಗೂ ಇದೆ. ಕೈಗಾರಿಕೋದ್ಯಮಿಗಳ ಮೇಲೆ ಅನಗತ್ಯ ಶುಲ್ಕ ವಿಧಿಸಿ ಭಯಪಡಿಸುವುದಿಲ್ಲ ಎಂದರು.
ಈಗಿರುವ ಶುಲ್ಕವನ್ನೇ ಮಾರ್ಚ್ 31ರವರೆಗೆ ಮುಂದುವರೆಸಿ, ಸಮ್ಮತಿ ಮೇಳದ ಕಾಲಾವಧಿಯನ್ನೂ ಮಾರ್ಚ್ ಅಂತ್ಯದವರೆಗೆ ವಿಸ್ತರಿಸುತ್ತೇನೆ. ಹೊಸ ಶುಲ್ಕ ವಿಧಿಸುವಾಗಲೂ ಅದು ಹೊರೆಯಾಗದಂತೆ ನೋಡಿಕೊಳ್ಳುತ್ತೇನೆ. ನಾನೂ ಕೂಡ ಕಾರ್ಖಾನೆಗಳನ್ನು ನಡೆಸುತ್ತಿರುವ ಕಾರಣ ಕೈಗಾರಿಕೆಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಪೂರ್ಣ ಅರಿವಿದೆ ಎಂದು ಹೇಳಿದರು.