ಮೈಸೂರು: ಕೊರೊನಾ ಅನೇಕ ಜನರ ಬದುಕನ್ನ ಕಸಿದುಕೊಂಡಿದೆ. ಹಲವು ಮಕ್ಕಳು ಅನಾಥರಾಗಿದ್ದಾರೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದಲ್ಲೊಂದು ಘಟನೆ ಇದೇ ಸಾಲಿಗೆ ಸೇರಿದೆ. ಕೊರೊನಾ ಮಹಾಮಾರಿಗೆ ತಾಯಿ ಬಲಿಯಾದ ಹಿನ್ನೆಲೆ ಆಕೆಯ ಬುದ್ದಿಮಾಂದ್ಯ ಮಗ ಕಲೀಂ ಉಲ್ಲಾ(20) ಅನಾಥನಾಗಿದ್ದು, ಪರಿಸ್ಥಿತಿ ಶೋಚನೀಯವಾಗಿದೆ. ಎರಡು ಕಾಲುಗಳಿಗೆ ಸ್ವಾಧೀನವಿಲ್ಲ, ಎರಡು ಕೈಗಳಲ್ಲಿ ಶಕ್ತಿ ಇಲ್ಲ. ಮಿಸುಕಾಡಲೂ ಸಾಧ್ಯವಾಗದಂತಹ ಸ್ಥಿತಿ ಕಲೀಂ ಉಲ್ಲಾನದು. ಮತ್ತೊಬ್ಬರ ಆಸರೆ ಇಲ್ಲದೇ, ಸಹಕಾರವಿಲ್ಲದೆ ಒಂದು ಅಡಿ ದಾಟಲಾಗದಂತಹ ಸ್ಥಿತಿ ಇವರದು.
ಹುಟ್ಟಿನಿಂದಲೇ ಇಂತಹ ಸ್ಥಿತಿ ತಲುಪಿದ ಕಲೀಂ ಉಲ್ಲಾ ತಾಯಿ ಆಯೇಷಾ ಕಾತೂನ್ ಮಸ್ತಿ ಮಗನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟವರು. ನಂಜನಗೂಡಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಆಯೇಷಾ ಕಾತೂನ್ ತಮ್ಮ ಮಗನಿಗಾಗಿ ಕೆಲಸ ತ್ಯಜಿಸಿದರು. ಕೆಲಸಕ್ಕೆ ಗುಡ್ ಬೈ ಹೇಳಿ ಮನೆಯಲ್ಲೇ ಬೀಡಿ ಕಟ್ಟುವ ಕಾಯಕ ಮಾಡಿಕೊಂಡು ಬುದ್ದಿಮಾಂದ್ಯ ಮಗನ ಪಾಲನೆ ಮಾಡುತ್ತಾ ಬಂದರು. ದುರ್ವಿಧಿ ಎಂಬಂತೆ 10 ವರ್ಷಗಳ ಹಿಂದೆ ಆಯೇಷಾ ಪತಿ ಸಹ ತೀರಿಕೊಂಡರು. ಸಂಸಾರ ನಿರ್ವಹಣೆ ಜಟಿಲವಾದರೂ ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದ ಆಯೇಷಾ ಕಾತೂನ್ ಮಸ್ತಿ ಮೇ 21 ರಂದು ಕೊರೊನಾ ಮಹಾಮಾರಿಗೆ ಬಲಿಯಾದರು.
ಹೆತ್ತ ಒಡಲಿನಲ್ಲೇ ಬೆಳೆದ ಕಲೀಂ ಉಲ್ಲಾ ಇನ್ನೂ ತಾಯಿಯನ್ನ ಸ್ಮರಿಸುತ್ತಾ ಕನವರಿಸುತ್ತಲೇ ಇದ್ದಾನೆ.ಮಾ..ಮಾ...ಎಂದು ಕಣ್ಣೀರಿಡುತ್ತಿರುವುದನ್ನು ಗ್ರಾಮಸ್ಥರು ಕಂಡು ಕನಿಕರ ವ್ಯಕ್ತಪಡಿಸುತ್ತಿದ್ದಾರೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಕಲೀಂ ಉಲ್ಲಾ ಇದೀಗ ದಿಕ್ಕು ತೋಚದ ಅನಾಥ.
ಒಡಹುಟ್ಟಿದ ಅಣ್ಣ ಸಲ್ಮಾನ್ ಸಹ ವಿಕಲಚೇತನ. ಅಣ್ಣನನ್ನ ಸಹೃದಯಿಯೊಬ್ಬಳು ಮದುವೆ ಆಗಿ ಜೀವನ ಕೊಟ್ಟಿದ್ದಾಳೆ. ಅಣ್ಣನ ಜೀವನಕ್ಕೆ ದಾರಿಯಾದರೂ ತಮ್ಮನನ್ನ ಪೋಷಿಸುವ ಸ್ಥಿತಿಯಲ್ಲಿ ಇಲ್ಲ. ಕೊರೊನಾ ಕಲೀಂ ಉಲ್ಲಾ ಬದುಕನ್ನ ಬರಡು ಮಾಡಿದೆ. ಸದ್ಯ ಕಲೀಂ ಉಲ್ಲಾ ಸಹೃದಯಿಗಳ ಸಹಾಯಾಸ್ತಕ್ಕೆ ಅಂಗಲಾಚುತ್ತಿದ್ದಾನೆ.