ಮೈಸೂರು: ಕೋವಿಡ್ ಬಿಕ್ಕಟ್ಟಿನಲ್ಲಿ ಜನಪರವಾಗಿ ಕೆಲಸ ಮಾಡದೇ ಮೇಯರ್ ತಸ್ನೀಂ ಹಾಗೂ ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರ ಮುಸುಕಿನ ಗುದ್ದಾಟ ನಡೆಸುತ್ತಿರುವುದು ಬಯಲಾಗಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ತಸ್ನೀಂ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಕಿಟ್ ವಿತರಣೆ ವಿಚಾರವಾಗಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾನು ಜನರಿಗೆ ಉತ್ತರ ನೀಡಬೇಕಿದೆ. ನನಗೆ ಕೆಲಸ ಮಾಡಲು ಆಗುತ್ತಿಲ್ಲ. ಆಯುಕ್ತರು ಸೂಕ್ಷ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.
ನಮ್ಮ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಕೆಲಸ ಮಾಡಿಲು ಸಾಧ್ಯವಿಲ್ಲ. ಇವರು ಮೇಯರ್ ಸ್ಥಾನಕ್ಕೂ ಬೆಲೆ ಕೊಡ್ತಿಲ್ಲ, ಸದಸ್ಯರ ಸ್ಥಾನಕ್ಕೂ ಬೆಲೆ ಕೊಡ್ತಿಲ್ಲ. ಈ ಬಗ್ಗೆ ನಾನು ಸಚಿವರ ಗಮನಕ್ಕೆ ತರ್ತೀನಿ ಎಂದರು.
ಪಾಲಿಕೆ ಆಯುಕ್ತರು ಅಧಿಕಾರಿಗಳು ತಮಗಿಷ್ಟ ಬಂದಂತೆ ಕೆಲಸ ಮಾಡ್ತಿದ್ದಾರೆ. ದಾನಿಗಳು ಎಷ್ಟು ಕೊಟ್ಟರು? ಏನು ಕೊಟ್ಟರು? ಅನ್ನೋ ಮಾಹಿತಿಯೇ ಇಲ್ಲ. ಮೊನ್ನೆ ಪಾಲಿಕೆಯ ಮೊಬೈಲ್ ಕ್ಲಿನಿಕ್ ಕಾರ್ಯಕ್ರಮಕ್ಕೆ ನನಗೆ ಸರಿಯಾಗಿ ಆಹ್ವಾನವೇ ನೀಡಿಲ್ಲ ಎಂದು ಆರೋಪಿಸಿದರು.
ಪಾಲಿಕೆ ಸದಸ್ಯರಿಗಷ್ಟೇ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಆದ್ರೆ ಇವರು ಪಾಲಿಕೆ ಸದಸ್ಯರನ್ನೇ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ನನಗೆ ತೀವ್ರ ಅಸಮಾಧಾನ ತಂದಿದೆ ಎಂದು ಪಾಲಿಕೆ ಆಯುಕ್ತರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ಮುಂದೆ ಈ ವಿಚಾರವಾಗಿ ಸತ್ಯಾಗ್ರಹ ಕೂಡ ಮಾಡಲು ಸಿದ್ಧಳಿದ್ದೇನೆ. ತಸ್ನೀಂಗೆ ಗೌರವ ಬೇಡ, ಮೇಯರ್ ಹುದ್ದೆಗೆ ಗೌರವ ನೀಡಲಿ ಎಂದರು.