ಮೈಸೂರು: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ನೂರಕ್ಕೂ ಹೆಚ್ಚು ಜೆಡಿಎಸ್ ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ನಗರದಲ್ಲಿ ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಅಬ್ದುಲ್ ಖದರ್ ನೇತೃತ್ವದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಹಾಗೂ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅಬ್ದುಲ್ ಖದರ್ ಮಾತನಾಡಿ, ಬಿಜೆಪಿ ಮತ್ತು ಆರ್ಎಸ್ಎಸ್ನವರು ಇಡೀ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ, ದ್ವೇಷ ಮಾಡಿ ನಮ್ಮ ಸಮುದಾಯಕ್ಕೆ ತೊಂದರೆ ನೀಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಬಹಿರಂಗವಾಗಿ ಬಿಜೆಪಿ ಮುಖಂಡರು ಮುಸಲ್ಮಾನರ ಓಟು ನಮಗೆ ಬೇಡ ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿಯಾಗಿರುವುದು ನಮಗೆಲ್ಲಾ ನೋವು ತಂದಿದೆ ಎಂದರು.
ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ನಮಗೆ ಗೌರವವಿದೆ. ಸಿ ಎಂ ಇಬ್ರಾಹಿಂ ಅವರಿಗೆ ಅಧಿಕಾರದ ಆಸೆ ಇಲ್ಲಾ ಅಂದ್ರೆ ತಕ್ಷಣ ನೀವು ರಾಜೀನಾಮೆ ಸಲ್ಲಿಸಬೇಕು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೆಲ್ಲಾ ತೊಂದರೆ ನೀಡಿದರು ಎಂಬುದು ನಿಮಗೂ ಗೊತ್ತಿದೆ. ಆದರೂ ಈಗ ನೀವು ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ, ಹಾಗಾಗಿ ನರಸಿಂಹರಾಜ ಕ್ಷೇತ್ರದ ಅಲ್ಪಸಂಖ್ಯಾತ ಮುಖಂಡರು ಹಾಗೂ ಜಾತ್ಯತೀತ ಚಿಂತನೆಯ ಎಲ್ಲಾ ಕಾರ್ಯಕರ್ತರು ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಮುಂದೆ ಯಾವ ಪಕ್ಷಕ್ಕೆ ಹೋಗಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಜೆಡಿಎಸ್ ಜಾತ್ಯತೀತ ಎಂದು ಹೇಳಿಕೊಳ್ಳಬಾರದು: ಸಿಎಂ ಸಿದ್ದರಾಮಯ್ಯ