ಮೈಸೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆಯೆಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಇಂದು ಈಟಿವಿ ಭಾರತ ಜೊತೆ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್, ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಸಂತ್ರಸ್ತೆಯು ತನಗೆ ಜೀವ ಭಯವಿದೆ. ತನ್ನ ಕುಟುಂಬಕ್ಕೆ ಮತ್ತು ತನಗೆ ರಕ್ಷಣೆ ಕೊಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ನನ್ನ ಪ್ರಕಾರ ಸಂತ್ರಸ್ತೆ ಪೊಲೀಸರ ನಿಯಂತ್ರಣದಲ್ಲಿದ್ದಾಳೆ ಎನಿಸುತ್ತಿದೆ.
ಈ ಸುದ್ದಿಯನ್ನೂ ಓದಿ: ರಮೇಶ್ ಜಾರಕಿಹೊಳಿ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ
ಸಿಡಿ ಪ್ರಕರಣದಲ್ಲಿ ಮೊದಲು ರಮೇಶ್ ಜಾರಕಿಹೋಳಿ ವಿರುದ್ಧ ದೂರ ದಾಖಲಿಸಿ ತನಿಖೆ ಕೈಗೊಳ್ಳಬೇಕಿತ್ತು. ಆದರೆ, ಅದನ್ನು ಬಿಟ್ಟು ಈ ಪ್ರಕರಣವನ್ನು ಯಾವುದೇ ಅಧಿಕಾರವಿಲ್ಲದ ಎಸ್‌ಐಟಿಗೆ ನೀಡಿದ್ದು, ತನಿಖೆಯ ದಿಕ್ಕು ತಪ್ಪಿಸಿ ನಂತರ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.