ಮೈಸೂರು: ಕಾಮಗಾರಿ ನಡೆಸದೇ ತಮ್ಮ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ಬಿಲ್ಲು ಪಡೆದಿರುವ ಹಾಗೂ ಉಸ್ತುವಾರಿ ಜಿಲ್ಲೆಯಲ್ಲಿ ಕಮಿಷನ್ ಆರೋಪ ಎದುರಿಸುತ್ತಿರುವ ಸಚಿವ ಮುನಿರತ್ನ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಸಚಿವ ಮುನಿರತ್ನ ಅವರ ಆರ್.ಆರ್ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 114 ಕಾಮಗಾರಿಗಳು ನಡೆದೇ ಇಲ್ಲ. ಆದರೆ 118.75 ಕೋಟಿ ಬಿಲ್ ಪಡೆಯಲಾಗಿದ್ದು, ಈ ಬಗ್ಗೆ ಸಂಸದ ಡಿ.ಕೆ ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಹಿಂದಿನ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಕೆಲಸ ಮಾಡದೆ ಹಣ ಪಡೆಯಲಾಗಿದೆ ಎಂದು ತನಿಖಾ ವರದಿ ನೀಡಿದ್ದರು. ಅಮೇಲೆ ಸಹ 40 ಕೋಟಿ ಬಿಡುಗಡೆ ಮಾಡಲಾಗಿದೆ ಅಂದರೆ ಕ್ಷೇತ್ರದಲ್ಲಿ ಮುನಿರತ್ನ ಕಾಮಗಾರಿ ನಡೆಸದೆ 118 ಕೋಟಿ ಹಣ ಕಬಳಿಸಿದ್ದಾರೆ ಎಂದು ಎಂ ಲಕ್ಷ್ಮಣ್ ದಾಖಲೆ ಬಿಡುಗಡೆ ಮಾಡಿದ್ದಾರೆ.
ಈ ರೀತಿಯ ಹಣ ಬಿಡುಗಡೆಗೆ ಮಾಡಿಸಿಕೊಳ್ಳಲು ವಿಶೇಷ ಹಣಕಾಸು ಅಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ತಮ್ಮ ಪ್ರಭಾವ ಬಳಸಿ ಹಾಗೂ ಹೆದರಿಸಿ, ಅವರ ಗಂಡನ ಪ್ರಕರಣವನ್ನು ಹಿಡಿದುಕೊಂಡು ಬ್ಲ್ಯಾಕ್ಮೈಲ್ ಮಾಡಿದ್ದಾರೆ. ಅದಕ್ಕೆ ಕಾಮಗಾರಿ ನಡೆಸದೇ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.
ಜೊತೆಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮುನಿರತ್ನ ಕಳೆದ ಒಂದು ವರ್ಷದಿಂದ ನಡೆದಿರುವ ಎಲ್ಲ ಕಾಮಗಾರಿಗಳಿಗೂ 10 ಪರ್ಸೆಂಟ್ ಕಮಿಷನ್ ನೀಡಬೇಕೆಂದು ಅಧಿಕಾರಿ ಮೂಲಕ ಒತ್ತಡ ಹೇರಿದ್ದಾರೆ. ಈ ಕುರಿತು ಅಲ್ಲಿಯ ಗುತ್ತಿಗೆದಾರರೊಬ್ಬರು ಕೆಂಪಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಇವೆಲ್ಲ ದಾಖಲಾತಿಗಳು ಇವೆ ಎಂದು ಹೇಳಿದರು.
ಎಲ್ಲಾ ದಾಖಲಾತಿಗಳು ಇದ್ದರೂ ಮುಖ್ಯಮಂತ್ರಿಗಳು ದಾಖಲಾತಿಗಳನ್ನು ಕೇಳುತ್ತಿರುವುದು ಸರಿಯಲ್ಲ. ಕೂಡಲೇ ಮುನಿರತ್ನ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕೆಂದು ಲಕ್ಷ್ಮಣ್ ಆಗ್ರಹಿಸಿದರು.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಭಾವುಕರಾದ ಸಚಿವ ವಿ ಸೋಮಣ್ಣ: ಕಮಿಷನ್ ಆರೋಪದ ಬಗ್ಗೆ ಗಂಭೀರ ಚರ್ಚೆ