ಮೈಸೂರು: ಕಲಬುರಗಿ, ಬೆಳಗಾವಿ, ಬೆಂಗಳೂರು ಹಾಗು ಮೈಸೂರಿನ ನಾಲ್ಕು ವಿಭಾಗಗಳಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಸಹಕಾರ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ 13,500 ಕೋಟಿ ರೂ., ಈ ಸಾಲಿನಲ್ಲಿ 14,500 ಕೋಟಿ ರೂ., ಹಾಗೂ ಮುಂದಿನ ವರ್ಷ 20 ಸಾವಿರ ಕೋಟಿ ರೂಪಾಯಿ ಸಾಲ ನೀಡುವಂತೆ ಮುಖ್ಯಮಂತ್ರಿಗಳ ಜೊತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಹೊಸಬರನ್ನು ಗುರುತಿಸಿ ಸಾಲ ನೀಡಬೇಕೆಂಬ ಗುರಿ ಇದೆ. ಅಲ್ಲದೇ, 21 ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ಸ್ ವತಿಯಿಂದ 14,500 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹಾಕಲಾಗಿದೆ. 5,529 ಕೋಟಿ ರೂ. ಸಾಲವನ್ನು 119 ಸಕ್ಕರೆ ಕಾರ್ಖಾನೆಗಳು ಪಡೆದಿವೆ. ಆದರೆ, ವಸೂಲಾತಿ ಆಗಿಲ್ಲ. ಅದೇ ರೈತರಿಗೆ ಸಾಲ ಕೊಟ್ಟರೆ ಅವರಿಂದ ಶೇಕಡ 100ರಷ್ಟು ಹಣ ಮರುಪಾವತಿಯಾಗುತ್ತದೆ. ಹೀಗಾಗಿ ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳಿಗಾಗಿ ಸಾಲ ಕೊಟ್ಟರೆ ಸಾಲ ಮರುಪಾವತಿಯಾಗುವುದಲ್ಲದೆ ಬ್ಯಾಂಕುಗಳು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ತಲಾ 3,000 ರೂ. ಸಿಗಬೇಕು ಎಂಬ ನಿಟ್ಟಿನಲ್ಲಿ ನಾನೂ ಸಹ ವಿಚಾರಣೆ ನಡೆಸುತ್ತಿದ್ದೇನೆ. ಈಗಾಗಲೇ 42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ ಬಹುತೇಕರಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ. ಕೆಲವೇ ಕೆಲವು ಆಶಾ ಕಾರ್ಯಕರ್ತೆಯರಿಗೆ ಲಭಿಸಿಲ್ಲ ಎಂಬ ಮಾಹಿತಿ ಕೇಳಿ ಬರುತ್ತಿದೆ. ಹೀಗಾಗಿ ಯಾರಿಗೆ ಪ್ರೋತ್ಸಾಹಧನ ತಲುಪಿಲ್ಲವೋ ಅವರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದು, ಅದಕ್ಕೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿದ್ದೇವೆ. ಇನ್ನು ಸ್ತ್ರೀ ಶಕ್ತಿ ಗುಂಪುಗಳಂತೆ ಆಶಾ ಕಾರ್ಯಕರ್ತೆಯರಿಗೂ ಸಾಲ ಯೋಜನೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಸಹಕಾರಿ ಸಂಘದ ಮೂಲಕ ಸಾಲ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ. ಶಂಕರ್ ಅವರು ಮೈಸೂರಿನಲ್ಲಿಯೇ ಇರಬೇಕೆಂಬುದು ನನ್ನನ್ನೂ ಸೇರಿದಂತೆ ಎಲ್ಲರ ಬಯಕೆಯಾಗಿತ್ತು. ಕೋವಿಡ್ ಸೇರಿದಂತೆ ಹಲವು ಸಂಕಷ್ಟಗಳ ಪರಿಸ್ಥಿತಿಯಲ್ಲಿ ಅವರ ಸೇವೆ ಶ್ಲಾಘನೀಯ. ಆದರೆ, ಹೆಚ್ಚಿನ ತರಬೇತಿಗಾಗಿ ಮಸ್ಸೂರಿಗೆ ಹೋಗಬೇಕಿದ್ದು, ಮುಂದಿನ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ತಮ್ಮನ್ನು ವರ್ಗಾವಣೆ ಮಾಡಿ ಎಂದು ಅವರೇ ಮುಖ್ಯಮಂತ್ರಿಗಳ ಬಳಿ ಕಳೆದ 15 ದಿನಗಳ ಹಿಂದೆಯೇ ಕೇಳಿಕೊಂಡಿದ್ದರು. ಮುಖ್ಯಮಂತ್ರಿಗಳು ಸಹ ನನ್ನ ಬಳಿ ಈ ಬಗ್ಗೆ ಚರ್ಚಿಸಿದಾಗ ಜಿಲ್ಲಾಧಿಕಾರಿಗಳಾದ ಅಭಿರಾಂ ಅವರು ನನ್ನ ಬಳಿಯೂ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದೆ. ಹೀಗಾಗಿ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.
ಅಲ್ಲದೇ, ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಶರತ್ ಅವರೂ ಸಹ ದಕ್ಷ ಅಧಿಕಾರಿಯಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರಿಗೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದರು.