ಮೈಸೂರು: ಜಿಲ್ಲೆಯಲ್ಲಿ ಚಿರತೆ ಮತ್ತೊಂದು ಬಲಿ ಪಡೆದಿದೆ. ಬಯಲು ಶೌಚಕ್ಕೆ ತೆರಳಿದ್ದ 11 ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಟಿ.ನರಸೀಪುರ ತಾಲೂಕಿನ ಹೊರಳಹಳ್ಳ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಬಾಲಕನಿಗಾಗಿ ಗ್ರಾಮಸ್ಥರು ರಾತ್ರಿಯಿಡೀ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗ್ರಾಮದ ಸಮೀಪ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮಸ್ಥರಿಂದ ರಾತ್ರಿ ಹುಡುಕಾಟ: 11 ವರ್ಷದ ಬಾಲಕ ಜಯಂತ್ ಕಳೆದ ರಾತ್ರಿ ಬಯಲು ಶೌಚಕ್ಕಾಗಿ ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಎಳೆದೊಯ್ದಿತ್ತು. ಗ್ರಾಮಸ್ಥರಿಗೆ ವಿಷಯ ಗೊತ್ತಾಗುತ್ತಿದ್ದಂತೆ ರಾತ್ರಿಯಿಡೀ ಶೋಧ ಕೈಗೊಂಡಿದ್ದರು. ಆದ್ರೂ ಪತ್ತೆಯಾಗಿರಲಿಲ್ಲ. ಗ್ರಾಮದಲ್ಲಿ ರಾತ್ರಿ ಆತಂಕ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸ್ಥಳಕ್ಕೆ ಶಾಸಕರು ಮತ್ತು ಡಿಸಿ ಆಗಮಿಸಿದ್ದರು.
ಗ್ರಾಮಕ್ಕೆ ರಾತ್ರಿಯೇ ಶಾಸಕ, ಡಿಸಿ ಭೇಟಿ: ವಿಷಯ ಗೊತ್ತಾಗುತ್ತಿದ್ದಂತೆ ಶಾಸಕ ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಗ್ರಾಮಕ್ಕೆ ಆಗಮಿಸಿ, ಜನರಿಗೆ ಧೈರ್ಯ ತುಂಬಿದ್ದರು. ಚಿರತೆ ಹಾವಳಿಯಿಂದ ಜನರು ಆಕ್ರೋಶಗೊಂಡಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅರಣ್ಯಾಧಿಕಾರಿಗಳು ಕೂಡ ಸ್ಥಳದಲ್ಲಿದ್ದರು.
ಇಂದು ಬೆಳಗ್ಗೆ ಬಾಲಕನ ಶವ ಪತ್ತೆ: ಇಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ರುಂಡ, ಇತರೆ ಭಾಗಗಳನ್ನು ಚಿರತೆ ತಿಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ: ಚಿರತೆ ದಾಳಿಯಿಂದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು, ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ದಾಳಿ ಹೆಚ್ಚುತ್ತಿದೆ. ಸರ್ಕಾರಕ್ಕೆ ಮಾನ,ಮರ್ಯಾದೆ ಇಲ್ಲ ಎಂದ ಮಾಜಿ ತಾ.ಪಂ. ಸದಸ್ಯ ರಮೇಶ್ ಕಿಡಿಕಾರಿದರು.
ಈಗಾಗಲೇ ಚಿರತೆಗೆ ನಾಲ್ವರು ಬಲಿ: ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಚಿರತೆ ದಾಳಿ ಹೆಚ್ಚುತ್ತಿದೆ. ಮೈಸೂರಲ್ಲೇ ಎರಡು ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಚಿರತೆ ದಾಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಜನರು ಮನವಿ ಮಾಡುತ್ತಲೇ ಇದ್ದಾರೆ.
ಈ ಹಿಂದೆ ನಡೆದ ಘಟನೆಗಳಿವು..: ಎರಡು ದಿನಗಳ ಹಿಂದಷ್ಟೇ ತಿ.ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ ವೃದ್ಧೆ ಬಲಿಯಾಗಿದ್ದರು. ಸಿದ್ದಮ್ಮ ಎಂಬ ವೃದ್ಧೆ ಮನೆಯಾಚೆಯಿದ್ದ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ಚಿರತೆ ದಾಳಿ ಮಾಡಿ ಕೆಲ ದೂರು ಎಳೆದೊಯ್ದಿತ್ತು. ಬಳಿಕ ಗ್ರಾಮಸ್ಥರು ಕಿರುಚಾಡಿದ್ದರಿಂದ ವೃದ್ಧೆಯನ್ನು ಬಿಟ್ಟು ಹೋಗಿತ್ತು. ಇದೇ ಚಿರತೆ, ಬಾಲಕನನ್ನು ಬಲಿ ಪಡೆದಿದೆ ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ 31ರಂದು ತಿ. ನರಸೀಪುರ ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಮಂಜುನಾಥ್ (18) ಎಂಬ ಯುವಕ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ್ದರು. ಹಾಗೆಯೇ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಎಂಬ ಯುವತಿ ಡಿಸೆಂಬರ್ 1ರಂದು ಚಿರತೆ ದಾಳಿಗೆ ಬಲಿಯಾಗಿದ್ದಳು. ಹಿತ್ತಲಿಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ಬಳಿಕ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಳು.
ಇದನ್ನೂ ಓದಿ: ಅಮಾಯಕರ ಮೇಲೆ ಚಿರತೆ ದಾಳಿ.. ಎಂಟು ಜನರಿಗೆ ಗಾಯ, ಕಾರಿನ ಮೇಲೆ ಎರಗಿದ ಬಿಗ್ ಕ್ಯಾಟ್