ಮೈಸೂರು : ಚಿರತೆ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ತಿ.ನರಸೀಪುರ ಮತ್ತು ಇಲ್ಲಿಗೆ ಹೊಂದಿಕೊಂಡಂತಿರುವ ನಂಜನಗೂಡು ತಾಲೂಕಿನ ಗಡಿ ಪ್ರದೇಶದಲ್ಲಿ ಮುಂದಿನ 15 ದಿನದೊಳಗೆ ಪಕ್ವಗೊಂಡಿರುವ ಕಬ್ಬು ಕಟಾವು ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ.
ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಉಂಟಾದ ಪ್ರಾಣ ಹಾನಿ ಸಂಬಂಧ ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ, ಬೆಳೆದಿರುವ ಕಬ್ಬು ಬೆಳೆ ಕಟಾವು ಮಾಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು. ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಪಕ್ವಗೊಂಡಿರುವ ಕಬ್ಬಿನ ವಿಸ್ತೀರ್ಣದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ, ಸುಮಾರು 200 ಎಕರೆ ಪ್ರದೇಶದಲ್ಲಿ ಪಕ್ವಗೊಂಡಿರುವ ಕಬ್ಬು ಇರುವುದಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇನ್ನು ತಿ.ನರಸೀಪುರ ತಾಲ್ಲೂಕು ಸೋಸಲೆ ಹೋಬಳಿಯಲ್ಲಿ ಚಿರತೆ ದಾಳಿಯು ಸಂಭವಿಸುತ್ತಿದ್ದು, ಮೊದಲು ಸೋಸಲೆ ಹೋಬಳಿಯಲ್ಲಿ ಪಕ್ವಗೊಂಡಿರುವ ಕಬ್ಬನ್ನು ಕಟಾವು ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಕಬ್ಬು ಕಟಾವು ಮಾಡಲು ನಿಯೋಜಿಸಿರುವ ತಂಡಗಳು ಹಾಗೂ ಅಗತ್ಯವಿರುವ ದಿವಸಗಳ ಬಗ್ಗೆ ಮಾಹಿತಿಯನ್ನು ಸೂಚಿಸುವಂತೆ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷರಿಗೆ ಹೇಳಿದರು. ಇದಕ್ಕೆ ಉತ್ತರಿಸಿದ ಕಾರ್ಯಾಧ್ಯಕ್ಷರು, ಒಟ್ಟು 19 ತಂಡಗಳು ಕಬ್ಬು ಕಟಾವು ಕಾರ್ಯದಲ್ಲಿ ಕಾರ್ಯಪ್ರವೃತ್ತವಾಗಿವೆ. ಪ್ರತಿ ತಂಡವು 15 ಟನ್‌ಗಳನ್ನು ಕಟಾವು ಮಾಡುತ್ತಿರುವುದಾಗಿ ವಿವರಿಸಿದರು.
ಪ್ರಸ್ತುತ ಇರುವ 19 ತಂಡಗಳನ್ನು 30 ತಂಡಗಳಿಗೆ ಏರಿಸಲು ಮತ್ತು ಪ್ರತಿ ದಿವಸ ಗರಿಷ್ಠ 60 ಟನ್ ಕಟಾವು ಮಾಡಲು ತಕ್ಷಣವೇ ಕ್ರಮವಹಿಸಲು ಜಿಲ್ಲಾಧಿಕಾರಿ ಇದೇ ವೇಳೆ ನಿರ್ದೇಶನ ನೀಡಿದರು. ಪ್ರತಿ ದಿನದ ಕಟಾವಿನ ಅಂಕಿ ಅಂಶಗಳ ಪ್ರಗತಿ ವರದಿಯನ್ನು ಮೇಲ್ವಿಚಾರಣೆ ಮಾಡಲು ಆಹಾರ ಮತ್ತು ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು, ತಿ.ನರಸೀಪುರ ತಹಶೀಲ್ದಾರ್ ಕ್ರಮ ಕೈಗೊಂಡು ದೈನಂದಿನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಇದೇ ವೇಳೆ ಸೂಚನೆ ನೀಡಿದರು.
40 ಗ್ರಾಮಗಳಲ್ಲಿ ಕಬ್ಬು ಕಟಾವಿಗೆ ಆದೇಶಿಸಿದ್ದ ಡಿಸಿ : ಈ ಹಿಂದೆಯೂ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾದ ಹಿನ್ನಲೆ ರೈತರು ಕಬ್ಬು ಕಟಾವು ಮಾಡವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಚಿರತೆಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಅರಣ್ಯಾಧಿಕಾರಿಗಳ ಮನವಿಯ ಮೇರೆಗೆ ಈ ಆದೇಶ ಮಾಡಿದ್ದರು. ಟಿ ನರಸೀಪುರ ತಾಲೂಕಿನ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 40 ಗ್ರಾಮಗಳಲ್ಲಿ ಕಟಾವಿಗೆ ಬಂದ ಕಬ್ಬನ್ನು ಜರೂರಾಗಿ ಕಟಾವು ಮಾಡುವಂತೆ ಜಿಲ್ಲಾಧಿಕಾರಿ ಇದೇ ವೇಳೆ ಸೂಚಿಸಿದ್ದರು.
ಪ್ರತ್ಯೇಕ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಮೇಲೆ ಚಿರತೆ ದಾಳಿ : ಕಳೆದ 2022ರ ಅಕ್ಟೋಬರ್ 31ರಂದು ಟಿ ನರಸೀಪುರ ತಾಲೂಕು ವ್ಯಾಪ್ತಿಯ ಸೋಸಲೆ ಹೋಬಳಿಯ ಎಂಎಲ್ ಹುಂಡಿ ಗ್ರಾಮದ ಮಂಜುನಾಥ ಎಂಬ ಯುವಕನ ಮೇಲೆ ಚಿರತೆ ದಾಳಿ ನಡೆಸಿತ್ತು.ಚಿರತೆ ದಾಳಿಯಿಂದ ಯುವಕ ಗಂಭೀರ ಗಾಯಗೊಂಡಿದ್ದ. 2022ರ ಡಿಸೆಂಬರ್ 1ರಂದು ಎಸ್ ಕೆಬ್ಬೆಹುಂಡಿ ಗ್ರಾಮದ ಮೇಘನಾ ಎಂಬವರು ಚಿರತೆ ದಾಳಿಗೊಳಗಾಗಿ ಮೃತಪಟ್ಟಿದರು. ಈ ಎಲ್ಲ ಘಟನೆಗಳಿಂದ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. ಇಲ್ಲಿನ ಗ್ರಾಮಗಳ ಜಮೀನಿನಲ್ಲಿ ಬೆಳೆದಿರುವ ಕಬ್ಬು ಚಿರತೆ ಸೆರೆ ಕಾರ್ಯಾಚರಣೆ ತೊಡಕಾಗಿ ಪರಿಣಮಿಸಿದ್ದು, ಕಬ್ಬು ಕಟಾವು ಮಾಡಲು ಮುಂದಾಗಿದೆ.
ಇದನ್ನೂ ಓದಿ : ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿ : ಸೌದೆ ತರಲು ಹೋದ ಬಾಲಕ ಹುಲಿ ದಾಳಿಗೆ ಬಲಿ