ಮೈಸೂರು: ದಸರಾ ಗಜಪಡೆ ತಾಲೀಮು ನಡೆಯುತ್ತಿದ್ದ ವೇಳೆ ಹೆಣ್ಣಾನೆ ಕಾವೇರಿ ಕಾಲಿಗೆ ಕಬ್ಬಿಣದ ಮೊಳೆಯೊಂದು ಚುಚ್ಚಿದೆ.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ನಿನ್ನೆ ಬೆಳಗ್ಗೆ ತಾಲೀಮು ವೇಳೆಯಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂದೆ ಅನೆ ತಾಲೀಮು ಮಾಡುವಾಗ ಕಬ್ಬಿಣದ ಮೊಳೆ ಕಾವೇರಿ ಆನೆಯ ಮುಂದಿನ ಕಾಲಿಗೆ ಚುಚ್ಚಿಕೊಂಡಿದೆ.
ಮುಂದೆ ಹೆಜ್ಜೆ ಇಡಲು ಕಷ್ಟ ಪಡುತ್ತಿರುವಾಗ ಇದನ್ನರಿತ ಮಾವುತನು ಅನೆಯ ಮುಂದಿನ ಎಡಗಾಲನ್ನು ಪರಿಶೀಲಿಸಿದಾಗ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಆ ಮೊಳೆಯನ್ನು ಮಾವುತ ತೆಗೆದಾಗ ಆನೆ ಕುಂಟುತ್ತಲೇ ತಾಲೀಮು ನಡೆಸಿತು. ನಂತರ ಅನೆಯ ಮುಂದಿನ ಕಾಲನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯ ಇಲ್ಲವೆಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್, ಸಣ್ಣ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು, ಗಾಬರಿ ಪಡುವಂತಹದ್ದು ಏನಿಲ್ಲ. ಆದರೂ ಇನ್ನು ಮುಂದೆ ತಾಲಿಮಿನ ವೇಳೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.