ಮೈಸೂರು: ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಲು ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಇಂದಿನಿಂದ ಕಪಿಲಾ ನದಿ ಹಾಗೂ ನಾಲೆಗಳಿಗೂ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಹೀಗಾಗಿ, ಕೃಷಿ ಚಟುವಟಿಕೆಗಳು ಗರಿಗೆದರಿದೆ.
ಕೇರಳದ ವಯನಾಡು ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ, ಕಬಿನಿ ಜಲಾಶಯ ತುಂಬುತ್ತಿದೆ. ಇಂದಿನ ಜಲಾಶಯದ ಗರಿಷ್ಠ ಮಟ್ಟ 2,283.02 ಅಡಿಯಿದೆ. ಪ್ರಸ್ತುತ ಒಳಹರಿವಿನ ಪ್ರಮಾಣ 49.31 ಕ್ಯುಸೆಕ್ ಹಾಗೂ ಹೊರಹರಿವಿನ ಪ್ರಮಾಣ 36.99 ಕ್ಯುಸೆಕ್ ಇದೆ.
ನಾಲೆಗಳಿಗೆ 625 ಕ್ಯುಸೆಕ್ ನೀರು ಹಾಗೂ ನದಿಗೆ 15,000 ಕ್ಯುಸೆಕ್ ನೀರು ಬಿಡಲಾಗಿದೆ. ಈ ಮೊದಲು ಜಲಾಶಯದಿಂದ ನದಿಗೆ ಅತಿ ಹೆಚ್ಚು ನೀರು ಬಿಟ್ಟಿದ್ದು ನದಿಪಾತ್ರದ ಹಾಗೂ ತಗ್ಗು ಪ್ರದೇಶದ ಜನರಿಗೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಬೆಳೆ ಹಾನಿ ಹಾಗೂ ಕೆಲವು ಮನೆಗಳೂ ಸಹ ಕುಸಿದಿದ್ದವು. ಪ್ರವಾಹ ಕಡಿಮೆಯಾದ ಕಾರಣ ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ.