ಮೈಸೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗಲು ಕಾರಣವಾದ ಜುಬಿಲಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಈ ತಂಡ ಜುಬಿಲಂಟ್ ಮೊದಲ ಸೋಂಕಿತ P 52 ಅವರನ್ನು ತನಿಖೆ ನಡೆಸಲಿದ್ದು, ಆತನಿಂದ ಸೋಂಕಿತರಾದ ಕುಟುಂಬ, ಮಾವ, ಪತ್ನಿ ಸೇರಿ ಕಂಪನಿಯ ಕೆಲವು ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದಾರೆ. ಜುಬಿಲಂಟ್ ಕಾರ್ಖಾನೆಗೆ ಎಲ್ಲಿಂದ ಕಚ್ಚಾವಸ್ತುಗಳು ಬರುತ್ತವೆ. ಕಂಪನಿ ಯಾವ ರೀತಿ ಉತ್ಪನ್ನಗಳನ್ನು ತಯಾರು ಮಾಡುತ್ತದೆ. ಇಲ್ಲಿನ ಉತ್ಪನ್ನಗಳನ್ನು ಎಲ್ಲೆಲ್ಲಿಗೆ ಕಳುಹಿಸಲಾಗುತ್ತದೆ. ಕಂಪನಿಗೆ ಯಾವ ಯಾವ ದೇಶದಿಂದ ವ್ಯಕ್ತಿಗಳು ಬಂದು ಹೋಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವ ಈ ತಂಡ ಈಗಾಗಲೇ ಕಂಪನಿಯಲ್ಲಿನ ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಿದೆ.
ಮಾಹಿತಿ ನೀಡದ P52: ಜುಬಿಲಂಟ್ ಕಾರ್ಖಾನೆಯ ಮೊದಲ ಕೊರೊನಾ ಸೋಂಕಿತ 25 ದಿನಗಳಿಂದಲೂ ಪೊಲೀಸರಿಗೆ ತನಗೆ ಹೇಗೆ ಕೊರೊನಾ ಬಂತು ಎಂಬ ಬಗ್ಗೆ ಮಾಹಿತಿ ನೀಡದೇ ತನಿಖಾ ಅಧಿಕಾರಿಗಳನ್ನೆ ದಿಕ್ಕು ತಪ್ಪಿಸುತ್ತಿದ್ದಾನೆ ಎನ್ನಲಾಗಿದೆ. ನನ್ನ ಹತ್ತಿರ ವಿದೇಶಕ್ಕೆ ಹೋಗಲು ಪಾಸ್ ಪೋರ್ಟ್ ಇಲ್ಲ, ವಿದೇಶದಿಂದ ಬಂದ ವ್ಯಕ್ತಿಗಳು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆದರೆ P52 ನಂತರ ಜುಬಿಲಂಟ್ ಕಾರ್ಖಾನೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.
ಇತನನ್ನು ಈಟಿವಿ ಭಾರತ ದೂರವಾಣಿಯಲ್ಲಿ ಮಾತನಾಡಿಸಲು ಯತ್ನಿಸಿದಾಗ ನನಗೆ ಡಾಕ್ಟರ್ ಹಾಗೂ ಪೊಲೀಸ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಬೇಡಿ ಎಂದು ತಿಳಿಸಿದ್ದಾರೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಈಗ ಕೊರೊನಾದಿಂದ ಗುಣಮುಖನಾಗಿರುವ P52 ಜಿಲ್ಲಾಡಳಿತದ ವಿಶೇಷ ಕ್ವಾರಂಟೈನ್ನಲ್ಲಿದ್ದಾನೆ. ಈತನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ತಜ್ಞರು ತನಿಖೆ ಮಾಡುವ ಪ್ರಕರಣವಾಗಿರುವುರಿಂದ ಉನ್ನತ ಆರೋಗ್ಯ ಅಧಿಕಾರಿಗಳು ತನಿಖೆ ಮಾಡಿದರೆ ಒಳ್ಳೆಯದು. ಆದ್ದರಿಂದ ಈ ಪ್ರಕರಣದ ಪೊಲೀಸರು ತನಿಖೆ ಮಾಡುವ ಪ್ರಕರಣ ಅಲ್ಲ ಎಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ.