ಮೈಸೂರು: ಕೋವಿಡ್ ಸಂದರ್ಭದಲ್ಲಿ ಉಂಟಾದ ನಷ್ಟದಿಂದ ತಮ್ಮ ಗಿರವಿ ಅಂಗಡಿಯನ್ನೇ ಮುಚ್ಚಿ ಮಾಲೀಕನೋರ್ವ ರಾತ್ರೋರಾತ್ರಿ ಊರು ಬಿಟ್ಟು ನಾಪತ್ತೆಯಾಗಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ವಿವೇಕಾನಂದ ಸರ್ಕಲ್ ಬಳಿ ಮಾರುತಿ ಪಾನ್ ಮತ್ತು ಜ್ಯುವೆಲರಿ ಅಂಗಡಿ ನಡೆಸುತ್ತಿದ್ದ ನೇಮಿರಾಮ್ ಅಲಿಯಾಸ್ ರಾಮು (50) ವ್ಯಾಪಾರದಲ್ಲಿ ನಷ್ಟವುಂಟಾಗಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಏಳೆಂಟು ವರ್ಷಗಳಿಂದ ಚಿನ್ನದ ಅಂಗಡಿ ನಡೆಸುತ್ತಿದ್ದು, ಈತನ ಬಳಿ ಕೋಟ್ಯಂತರ ರೂಪಾಯಿ ಚಿನ್ನ ಅಡವಿಟ್ಟು ಜನರು ಹಣ ಪಡೆಯುತ್ತಿದ್ದರು.
ಇದನ್ನೂ ಓದಿ:ಲಾಕ್‌ಡೌನ್ ಎಫೆಕ್ಟ್: ಪುಸ್ತಕ ಮಾರಾಟವಿಲ್ಲದೆ ಕಂಗಾಲಾದ ಪುಸ್ತಕ ವ್ಯಾಪಾರಿಗಳು
ಕೋವಿಡ್ ಸಂದರ್ಭದಲ್ಲಿ ಗಿರವಿ ಇಡುವವರ ಸಂಖ್ಯೆ ಹೆಚ್ಚಾಗಿದ್ದು, ಆ ಸಂದರ್ಭದಲ್ಲಿ ನೇಮಿರಾಮ್ ಹೆಚ್ಚಿನ ಬಡ್ಡಿಗೆ ಹಣವನ್ನು ಬೇರೆ ಕಡೆಯಿಂದ ತಂದು ಚಿನ್ನ ಗಿರವಿಟ್ಟುಕೊಂಡಿದ್ದನು. ಆದರೆ ಗಿರವಿಟ್ಟ ಚಿನ್ನವನ್ನು ಜನರು ಬಿಡಿಸಿಕೊಳ್ಳಲಿಲ್ಲ. ಇನ್ನೊಂದೆಡೆ ಇವರಿಗೆ ಬಡ್ಡಿ ಕಟ್ಟುವಂತೆ ಒತ್ತಡ ಕೂಡ ಹೆಚ್ಚಾಗಿತ್ತಂತೆ.
ಇದನ್ನೂ ಓದಿ: ಕೇಟರಿಂಗ್ ಉದ್ಯಮಕ್ಕೂ ತಟ್ಟಿದ ಲಾಕ್‌ಡೌನ್ ಬಿಸಿ: ಚೇತರಿಸಿಕೊಳ್ಳಲಾಗದಷ್ಟು ನಷ್ಟ
ಜೊತೆಗೆ ಪಾಲುದಾರಿಕೆಯಲ್ಲಿ ಪಿರಿಯಾಪಟ್ಟಣದಲ್ಲಿ ಕಾನ್ವೆಂಟ್ ನಡೆಸುತ್ತಿದ್ದರು. ಸಣ್ಣ ಪುಟ್ಟ ರಿಯಲ್ ಎಸ್ಟೇಟ್ನಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗ್ತಿದೆ. ಇವರ ವ್ಯವಹಾರಗಳು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ತನ್ನ ಮನೆಯನ್ನು ಮತ್ತೊಬ್ಬ ಗಿರವಿ ಅಂಗಡಿ ಮಾಲೀಕನಿಗೆ 2.80 ಕೋಟಿಗೆ ಮಾರಿ ಹಣ ಹಾಗೂ ಕೋಟ್ಯಂತರ ರೂ. ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಇದೀಗ ಬಂಗಾರ ಗಿರವಿಯಿಟ್ಟವರು ಕಂಗಾಲಾಗಿದ್ದು, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.