ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ನೀಡಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಹೈಕಮಾಂಡ್ ರಾಜ್ಯ ನಾಯಕರಿಗೆ ಬಿಟ್ಟುಕೊಟ್ಟಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಸೋತಾಗ, ರಾಜ್ಯದ ಪರವಾಗಿ ಇರಲಿ ಅಂತ ರಾಜ್ಯಸಭೆಗೆ ಆಯ್ಕೆ ಮಾಡಲು ನಾವು ಕೂಡ ಸಹಕಾರ ಕೊಟ್ಟಿದ್ದೆವು. ಅದರ ಆಧಾರದ ಮೇಲೆ ನೀವು ನಮಗೆ ಬೆಂಬಲ ಕೊಡಿ ಎಂದು ಕೇಳಿದ್ದೇವೆ ಎಂದು ಹೇಳಿದರು.
ದೇವೇಗೌಡರಿಗೆ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಲಾಗಿತ್ತು. ಆದರೆ, ಅವರು ತುಮಕೂರು ಬೇಕು ಎಂದು ಅಲ್ಲಿಗೆ ಹೋದರು. ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ಮುದ್ದೆ ಹನುಮನೇಗೌಡರಿಗೆ ಅನ್ಯಾಯ ಮಾಡಿದಂತಾಗಿದೆ. ಅದನ್ನು ಸರಿಪಡಿಸಲು ಈಗಲೂ ಆಗಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಏಕಾಂಗಿ ಅಲ್ಲ: ಸಭೆಯೊಂದರಲ್ಲಿ ಸಿದ್ದರಾಮಯ್ಯ ಬಿಜೆಪಿ ಅವರು ಸೀಳುನಾಯಿ ತರ ಮುಗಿಬೀಳುತ್ತಾರೆ ಎಂದು ಹೇಳಿದ್ದಾರೆ. ಅವರು ಎಂದಿಗೂ ಏಕಾಂಗಿ ಅಲ್ಲ. ಅವರ ಹಿಂದೆ ನಾವೆಲ್ಲ ಇದ್ದೇವೆ ಎಂದು ಸಿದ್ದರಾಮಯ್ಯ ಪರ ಮಾತನಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್ ಮಾತನಾಡಿ, ಕಳೆದ 8 ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿದ್ದರಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದೇವೆ. ಸಾವಿರಾರು ಕೈಗಾರಿಕೆಗಳು ಮುಚ್ಚಿ ಕೋಟ್ಯಂತರ ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ. ತಾಂತ್ರಿಕವಾಗಿ ದೇಶ ಯಾವುದೇ ಮುನ್ನಡೆ ಸಾಧಿಸಿಲ್ಲ. ಉದ್ಯೋಗ ಭರ್ತಿಯಾಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಆಗುತ್ತಿಲ್ಲ. ಉದ್ಯೋಗವಕಾಶಗಳು ಲಭ್ಯವಾಗುತ್ತಿಲ್ಲ. ಐಟಿ- ಬಿಟಿ, ಕೌಶಲ್ಯದಲ್ಲಾದರೂ ಕಾಂಗ್ರೆಸ್ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದ್ದು, ಬಿಜೆಪಿಯವರು ಕೇವಲ ಧಾರ್ಮಿಕ ಭಾವನೆ ಕೆದುಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಸಚಿವರೇನೂ ಮಾಡುತ್ತಿದ್ದಾರೆಂಬುದು ಮುಖ್ಯಮಂತ್ರಿಗಳಿಗೂ ಗೊತ್ತಾಗುತ್ತಿಲ್ಲ. ಸರ್ಕಾರ ಶೇ.40 ರಷ್ಟು ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು. ಮಧು ಮಾದೇಗೌಡರಿಗೆ ಬೆಂಬಲ ಇದೆ. ಜಿ. ಮಾದೇಗೌಡರು ಕಾವೇರಿ ಹೋರಾಟದ ಕಾಲದಲ್ಲಿ ರೈತರಿಗೆ ಅವರು ಕೊಟ್ಟಷ್ಟು ಕೊಡುಗೆಯನ್ನು ಬೇರೆ ಯಾರೂ ಕೊಟ್ಟಿಲ್ಲ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ : ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಮತಕೇಂದ್ರದಲ್ಲಿ ಸಕಲ ಸಿದ್ಧತೆ