ಮೈಸೂರು: ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾಗುತ್ತೆ. ಟೈಮ್ಗೆ ಏನಾಗಬೇಕು ಅದೇ ಆಗುತ್ತದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾರ್ಮಿಕವಾಗಿ ಹೇಳಿದರು.
ಎನ್ಡಿಎ ಜೊತೆ ಜೆಡಿಎಸ್ ಕೈ ಜೋಡಿಸುವ ವಿಚಾರವಾಗಿ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ, ನನ್ನ ಗಮನಕ್ಕೆ ಬಂದಿಲ್ಲ. ಕಾಲಚಕ್ರ ಉರುಳಿದಂತೆ ರಾಜಕೀಯ ಬದಲಾಗುತ್ತದೆ. ಧರಂಸಿಂಗ್ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಡಿಯೂರಪ್ಪ ಡಿಸಿಎಂ ಆಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ಡಾ. ಜಿ. ಪರಮೇಶ್ವರ್ ಡಿಸಿಎಂ ಆಗಿದ್ರು. ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಆಗುತ್ತೆ ಎಂದರು.
ಓದಿ: ಕಾಂಗ್ರೆಸ್ನಿಂದ ಕುಮಾರಸ್ವಾಮಿ ಹೆಸರು ಕೆಟ್ಟಿಲ್ಲ: ಜಿ.ಟಿ.ದೇವೇಗೌಡ
ಮೇಯರ್ ಚುನಾವಣೆಗೆ ಬಗ್ಗೆ ನನಗೆ ಕೇಳಲ್ಲ: ಮೇಯರ್ ಚುನಾವಣೆ ಸಮೀಪವಿದೆ. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಗೊತ್ತಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನ್ನನ್ನು ಕೇಳಲಿಲ್ಲ. ನಾನು ಈಗ ಉಸ್ತುವಾರಿ ಸಚಿವನಲ್ಲ. ಈಗ ನನ್ನ ಮಾತು ಕೇಳ್ತಾರ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಸಭೆಗೆ ಆಹ್ವಾನ ಬಂದಿಲ್ಲ: ಜ.7 ರಂದು ನಡೆಯುವ ಜೆಡಿಎಸ್ ನಿಷ್ಠಾವಂತರ ಸಭೆಗೆ ಆಹ್ವಾನ ಬಂದಿಲ್ಲ. ಫ್ರೀ ಇದ್ರೆ ಹೋಗ್ತೀನಿ. ಮೊದಲು ನನಗೆ ಕ್ಷೇತ್ರದ ಕೆಲಸ ಮುಖ್ಯ. 2021ಕ್ಕೆ ನನ್ನ ರಾಜಕೀಯ ಬದಲಾವಣೆಯಲ್ಲ. 2023ಕ್ಕೆ ಬದಲಾವಣೆ ಆಗಬಹುದು ಎಂದರು.