ಮೈಸೂರು: ತಮಿಳುನಾಡಿನಲ್ಲಿ ಪುರಾತನ ದೇವಾಲಯದಲ್ಲಿ ಮೂಲ ಮೂರ್ತಿಗಳನ್ನು ದುಷ್ಕರ್ಮಿಗಳು ಕದ್ದಿದ್ದಾರೆ. ಅವುಗಳನ್ನು ರಕ್ಷಣೆ ಮಾಡಲು ಅಲ್ಲಿನ ಸರ್ಕಾರ ಮುಂದಾಗಬೇಕಿದೆ ಎಂದು ಈಶಾ ಫೌಂಡೇಶನ್ ಅಧ್ಯಕ್ಷ ಜಗ್ಗಿ ವಾಸುದೇವ ಒತ್ತಾಯಿಸಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು, ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ತಮಿಳುನಾಡಿನಲ್ಲಿ ಪುರಾತನ ದೇವಾಲಯಗಳು ಉಳಿಯಬೇಕಿದೆ. ಅಲ್ಲಿ 1200 ದೇವಾಲಗಳಲ್ಲಿ ಪೂಜೆ ನಡೆಯುತ್ತಿಲ್ಲ. ಸರ್ಕಾರ ನಿರ್ಲಕ್ಷ್ಯ ತೋರಿದ್ರೆ ಮುಂದಿನ 50 ವರ್ಷಗಳಲ್ಲಿ ದೇವಾಲಯಗಳು ಇರುವುದಿಲ್ಲ. ದೇವಾಲಯನ್ನು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುತ್ತೂರು ಶ್ರೀಗಳನ್ನು ನೋಡಿ ಬಹಳ ದಿನ ಆಗಿತ್ತು. ಕೊರೊನಾ ಬಂದ ಮೇಲೆ ನೋಡಿಯೇ ಇರಲಿಲ್ಲ. ಅವರನ್ನು ನೋಡಲು ಹಾಗೂ ಕಾವೇರಿ ಕೂಗು ಪ್ರಾಜೆಕ್ಟ್ ಬಗ್ಗೆ ಮಾತನಾಡಲು ಬಂದಿದ್ದೆ ಎಂದು ಜಗ್ಗಿ ವಾಸುದೇವ್ ತಿಳಿಸಿದರು.
ಬೈಕ್ನಲ್ಲಿ ಮಠಕ್ಕೆ ಭೇಟಿ: ಜಗ್ಗಿ ವಾಸುದೇವ್ ಅವರು ಬೈಕ್ನಲ್ಲೇ ಮಠಕ್ಕೆ ಆಗಮಿಸಿದರು. ಇವರಿಗೆ ಮಠದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಇದೇ ವೇಳೆ ಕಾವೇರಿ ಕೂಗೂ ಯಶಸ್ವಿಯಾಗಿ ಕಾಣುತ್ತಿದೆ. ರೈತರಿಗೆ 1 ಕೋಟಿ 10 ಲಕ್ಷ ಸಸಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.