ಮೈಸೂರು: ಈವರೆಗೆ ಕೇವಲ ನಗರ ಪ್ರದೇಶಗಳಿಗಷ್ಟೇ ಸಿಮಿತವಾಗಿದ್ದ ಡಿಜಿಟಲ್ ಪೇ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ತೆರಿಗೆ ಸೇರಿದಂತೆ ಇತರ ಸೇವಾ ಶುಲ್ಕವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಚಯಿಸಿದ ಪ್ರಥಮ ಪ್ರಯೋಗ ಇದಾಗಿದ್ದು, ಈ ವಿನೂತನ ಸೌಲಭ್ಯದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ಈ ಕ್ರಾಂತಿಕಾರಕ ಬದಲಾವಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನಿದು ಕ್ಯೂಆರ್ ಕೋಡ್? ಇದರ ಉಪಯೋಗ ಏನು: ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಎಂದರೆ ಕೇವಲ ಮೊಬೈಲ್ ಮೂಲಕ ಶುಲ್ಕ ಪಾವತಿಸುವುದು. ಜನರು ತಮ್ಮ ಟ್ರೇಡ್ ಲೈಸೆನ್ಸ್ ಶುಲ್ಕದಿಂದ ಹಿಡಿದು ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಹದ್ದುಬಸ್ತು, ನಾಡ ಕಚೇರಿ, ಕೇಬಲ್ ಅನುಮತಿ, ಜಾತಿ ಆದಾಯ ಪ್ರಮಾಣಪತ್ರ, ನೀರಿನ ಬಿಲ್ ಸೇರಿದಂತೆ ಇತರ ಶುಲ್ಕವನ್ನು ಮೊಬೈಲ್ ಮೂಲಕ ಪಾವತಿಸುವ ಸರಳ ವ್ಯವಸ್ಥೆಯಾಗಿದೆ. ಹೊಸಕೋಟೆ ಗ್ರಾಮದಲ್ಲಿ 5,600ಕ್ಕೂ ಹೆಚ್ಚು ಜನ ಸುಶಿಕ್ಷಿತರಿದ್ದು, ಶೇ. 75ರಷ್ಟು ಮಂದಿ ಸ್ಮಾರ್ಟ್ ಫೋನ್ಗಳನ್ನು ಹೊಂದಿದ್ದಾರೆ. ಇಲ್ಲಿನ ಬಾಪೂಜಿ ಸೇವಾ ಕೇಂದ್ರದ ಮೂಲಕ ಕ್ಯೂಆರ್ ಕೋಡ್ ಪರಿಚಯಿಸಲಾಗಿದ್ದು, ಇದರಿಂದ ಹಣ ನೇರವಾಗಿ ಬ್ಯಾಂಕ್ ಖಾತೆ ಸೇರುತ್ತದೆ. ಸಾರ್ವಜನಿಕರ ಸಮಯವೂ ಉಳಿತಾಯವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಾರದರ್ಶಕತೆ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ.
ಕ್ಯೂಆರ್ ಕೋಡ್ ವ್ಯವಸ್ಥೆಯ ಪ್ರಚಾರ: ಗ್ರಾಮ ಪಂಚಾಯಿತಿಯಲ್ಲಿ ನೀಡುವ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಕ್ಯೂಆರ್ ಕೋಡ್ಗಳನ್ನು ಅಂಟಿಸಿ ಪ್ರಚುರಪಡಿಸಲಾಗುತ್ತಿದೆ. ಆಡಳಿತಾತ್ಮಕ ದಕ್ಷತೆ ಮತ್ತು ಆರ್ಥಿಕ ದುರುಪಯೋಗವನ್ನು ಇದು ಕಡಿಮೆ ಮಾಡಿದೆ. ಜೊತೆಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಲು ಗ್ರಾಮದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ವಿನೂತನ ಸೌಲಭ್ಯದ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದಾರೆ. ಇದರ ಸಫಲತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಈ ವ್ಯವಸ್ಥೆ ಯಶಸ್ವಿಯಾದರೆ ಎಲ್ಲ ಗ್ರಾಮ ಪಂಚಾಯತಿಗಳಿಗೂ ವಿಸ್ತರಿಸಲು ಸಿಇಒ ಅವರು ಚಿಂತನೆ ನಡೆಸಿದ್ದಾರೆ. - ಎಂ.ಕೃಷ್ಣ ರಾಜು, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ
ಕ್ಯೂಆರ್ ಕೋಡ್ ಸೌಲಭ್ಯದಿಂದ ಪಾರದರ್ಶಕತೆ ಬಂದಿದೆ. ಸಂಗ್ರಹಿಸಿದ ಬಿಲ್ ಮತ್ತು ತೆರಿಗೆ ಮೊತ್ತವನ್ನು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಲು ವಿನಿಯೋಗಿಸುತ್ತಿದ್ದ ಸಮಯವೂ ಉಳಿಯುತ್ತಿದೆ. ಪಂಚಾಯಿತಿ ಮೂಲಕ ನೀಡುತ್ತಿದ್ದ 44 ಸೇವೆಗಳಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಬಳಕೆ ಮಾಡಲಾಗುತ್ತಿದೆ. - ಪೂರ್ಣಿಮಾ ವಿ ಎನ್, ಹೊಸಕೋಟೆ ಗ್ರಾಮ ಪಂಚಾಯಿತಿಯ ಪಿಡಿಒ
ಗ್ರಾಮಸ್ಥರು ಕ್ಯೂಆರ್ ಕೋಡ್ ವ್ಯವಸ್ಥೆ ಬಗ್ಗೆ ಹೇಳಿದ್ದೇನು: ಹೊಸಕೋಟೆ ಗ್ರಾಮ ಪಂಚಾಯತಿಯಲ್ಲಿ ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ ಈ ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದು ಖುಷಿ ತರಿಸಿದೆ. ಎಲ್ಲಾ ತರಹದ ಬಿಲ್ಗಳನ್ನು ಈ ಸ್ಕ್ಯಾನರ್ ಮುಖಾಂತರವೇ ಕಟ್ಟಬಹುದಾಗಿದೆ. ಇದರಿಂದ ನಮಗೆ ಬಿಲ್ ಕಟ್ಟಲು ಆಗುತ್ತಿದ್ದ ಸಮಯ ಉಳಿತಾಯ ಆಗುತ್ತಿದೆ. ಇದರಲ್ಲೇ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಬಿಲ್ ಪಾವತಿ ಮಾಡುವುದರಿಂದ ಮನೆಗೆ ಬಂದು ಬಿಲ್ ರಸೀದಿ ತಲುಪಿಸುತ್ತಾರೆ. ಇದರಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಬಿಲ್ ಪಾವತಿ ಮಾಡಬಹುದಾಗಿದೆ. ಇದರಿಂದ ನಾವು ಪಂಚಾಯಿತಿ ಬಳಿ ಹೋಗುವುದು ತಪ್ಪಿದೆ. ಸಮಯದ ಜೊತೆಗೆ ಪೆಟ್ರೋಲ್ ಸೇರಿ ಇತರ ಉಳಿತಾಯ ಆಗುತ್ತಿದೆ. ಗ್ರಾಮಸ್ಥರೆಲ್ಲರಿಗೂ ಇದರಿಂದ ಅನುಕೂಲವಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಯವರಿಗೆ ಧನ್ಯವಾದ ಹೇಳುತ್ತೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.