ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದ್ದಾರೆ.
34ನೇ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಬೆಂಕಿ ಹಾಕಲಿಲ್ಲ ಅಂದರೆ ಕಾಡಿಗೆ ಬೆಂಕಿ ಬೀಳಲು ಸಾಧ್ಯವೇ ಇಲ್ಲ. ಕಳೆದ ಐದು ವರ್ಷಗಳಿಂದ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಪ್ರದೇಶಗಳನ್ನು ನೋಡಿದ್ದೀನಿ. ಪ್ರಕರಣ ಸತ್ಯಾಂಶ ತನಿಖೆಯಿಂದ ಹೊರಬರಬೇಕಿದೆ ಎಂದರು.
ಎರಡು ಅರಣ್ಯ ಪ್ರದೇಶಗಳು ಸೂಕ್ಷ್ಮ ಹಾಗೂ ಮಳೆಯ ತಾಣವು ಹೌದು. ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಅತ್ಯಾಧುನಿಕ ಯಂತ್ರೋಪಕರಗಳನ್ನ ಬಳಸಿ ಬೆಂಕಿ ನಂದಿಸಲು ಮುಂದಾಗಬೇಕು. ಅತಿ ಹೆಚ್ಚು ಹುಲಿ ಇರುವ ಪ್ರದೇಶಗಳಿವು. ಇಲ್ಲೇ ಪ್ರಾಣಿಗಳನ್ನು ಸಂರಕ್ಷಣೆ ಮಾಡಲಿಲ್ಲವಾದರೆ ಬೇರೆಡೆ ಸಂರಕ್ಷಣೆ ಮಾಡಲು ಸಾಧ್ಯವೇ? ಎಂದು ಸಂಸದ ಸಿಂಹ ಪ್ರಶ್ನಿಸಿದರು.
ಕಾಡ್ಗಿಚ್ಚಿನ ವಿಚಾರವಾಗಿ ಯಾರ ಮೇಲೂ ಆರೋಪ ಪ್ರತ್ಯಾರೋಪ ಮಾಡಲ್ಲ. ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ ಎಂದರು. ಇದೇ ವೇಳೆ ವೇಳೆ ಪತ್ರಕರ್ತರ ಸಮಸ್ಯೆಗಳ ಕುರಿತು ಸಂಸದ ಮಾತನಾಡಿದರು.