ಬೆಂಗಳೂರು : ಕೊರೊನಾ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಆದಾಗ್ಯೂ, ಅದನ್ನು ನಿರ್ಲಕ್ಷಿಸುವುದು ಅಷ್ಟು ಸರಿಯಲ್ಲ ಎಂದು ಖ್ಯಾತ ಆಯುರ್ವೇದ ತಜ್ಞ ಹಾಗೂ ಪ್ರಶಾಂತಿ ಆಯುರ್ವೇದ ಕೇಂದ್ರದ ಮುಖ್ಯಸ್ಥ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.
ನಗರದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಚಳಿಗಾಲ ಎದುರಾಗುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸಾರ್ವಜನಿಕ ಸ್ಥಳದಲ್ಲಿ ಜನ ಕೈಗೊಳ್ಳಬಹುದಾದ ಎಚ್ಚರಿಕೆ ಹಾಗೂ ಮುಂಜಾಗ್ರತೆಯನ್ನು ಕ್ರಮಬದ್ಧವಾಗಿ ಅನುಸರಿಸಿದರೆ ಯಾವುದೇ ಆತಂಕ ಇಲ್ಲ. ನೂರಕ್ಕೆ ಹತ್ತು ಮಂದಿ ಕೊರೊನಾಗೆ ತುತ್ತಾಗುತ್ತಿದ್ದಾರೆ. ಈ ರೀತಿ ತುತ್ತಾದ ನೂರು ಮಂದಿಯಲ್ಲಿ ಒಂದರಿಂದ ಎರಡು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಅಂಕಿ-ಅಂಶ ಗಮನಿಸಿದರೆ ಇದು ಅಷ್ಟೊಂದು ಮಾರಕ ರೋಗ ಅಲ್ಲ ಎನ್ನುವುದು ಅರಿವಿಗೆ ಬರುತ್ತದೆ. ಈ ಹಿನ್ನೆಲೆ ಜನರು ಹೆದರುವ ಅಗತ್ಯವಿಲ್ಲ. ನಿಧಾನವಾಗಿ ಇದರ ಪ್ರಭಾವ ಕಡಿಮೆಯಾಗುತ್ತಿದ್ದು ಸಾಧ್ಯವಾದಷ್ಟು ಬೇಗ ಇದು ಅಂತ್ಯ ಕಾಣುವ ನಿರೀಕ್ಷೆ ಇದೆ ತಿಳಿಸಿದ್ದಾರೆ.