ಮೈಸೂರು: ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಂಟೇನ್ಮೆಂಟ್ ಝೋನ್ ಕೂಡ ವಿಸ್ತಾರಗೊಳ್ಳುತ್ತಿವೆ. ಇಷ್ಟಾದ್ರೂ ಜನರಿಗೆ ಕೊರೊನಾ ಆತಂಕವಿಲ್ಲದಂತಾಗಿದೆ.
ಮೈಸೂರಿನ ಕೊರೊನಾ ಮೊದಲ ಅಲೆಯಲ್ಲಿ 92 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ತಲುಪಿದರು. ಆದರೆ, ಲಾಕ್ಡೌನ್ ಸಡಿಲಗೊಂಡ ನಂತರ ಅಂತಾರಾಜ್ಯ ಹಾಗೂ ಅಂತರ ಜಿಲ್ಲೆ ಪ್ರಯಾಣ ಬೆಳೆಸಿದವರ ಪೈಕಿ 133 ಮಂದಿಗೆ(ಕೊರೊನಾ ಎರಡನೇ ಅಲೆ) ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಮೈಸೂರಿನಲ್ಲಿ 53 ಕಂಟೇನ್ಮೆಂಟ್ ಝೋನ್ಗಳಾಗಿವೆ.
ಹೆಚ್ ಡಿ ಕೋಟೆ ತಾಲೂಕು ಹೊರತುಪಡಿಸಿ, ಇನ್ನುಳಿದ ಮೈಸೂರಿನ 7 ತಾಲೂಕುಗಳಲ್ಲಿ ಕಂಟೇನ್ಮೆಂಟ್ ಝೋನ್ ಇದ್ದೇ ಇದೆ. ಇದರಿಂದ ಹಲವು ಗ್ರಾಮಗಳಲ್ಲಿ ಕಂಟೇನ್ಮೆಂಟ್ ಝೋನ್ನಿಂದ ಜನರು ಆಚೆ ಬರಲು ಪರದಾಡುತ್ತಿದ್ದಾರೆ. ಇನ್ನು, ಕೆಲವೊಡೆ ಕಂಟೇನ್ಮೆಂಟ್ ಝೋನ್ ಅಂತಾ ಗೊತ್ತಿದ್ದರೂ ಅಕ್ಕಪಕ್ಕ ಜನ ತಿರುಗಾಡುತ್ತಿದ್ದಾರೆ.
ಮೈಸೂರು ನಗರ ಪ್ರದೇಶದಲ್ಲಿ ಕಂಟೇನ್ಮೆಂಟ್ ಝೋನ್ ಹೆಚ್ಚಾಗಿವೆ. ದೇವರಾಜ ಮಾರುಕಟ್ಟೆ ಸೇರಿ ವಾಣಿಜ್ಯ ಕೇಂದ್ರಗಳತ್ತ ಬರುವವರ ಸಂಖ್ಯೆಯೂ ಕಡಿಮೆ ಇಲ್ಲ. ಅನಗತ್ಯ ಸುತ್ತಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆರಂಭದಲ್ಲಿ ಕೊರೊನಾ ಸೋಂಕು ತಿಳಿಯದೇ ಹಲವು ಕಡೆ ಸಂಚಾರ ಮಾಡಿರುತ್ತಾರೆ. ಸೋಂಕು ದೃಢಪಟ್ಟ ನಂತರ ಟ್ರಾವೆಲ್ ಹಿಸ್ಟರಿ ಹುಡುಕಲು ಜಿಲ್ಲಾಡಳಿತ ಮುಂದಾದಾಗ ಆಗ ಜನರಿಗೆ ಭಯ ಶುರುವಾಗುತ್ತದೆ.
ಸಾಧ್ಯವಾದಷ್ಟು ಮನೆಯಲ್ಲಿಯೇ ಜೋಪಾನವಾಗಿರಿ ಅಂತಾ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪರಿಪರಿಯಾಗಿ ಮನವಿ ಮಾಡಿದ್ದಾರೆ. ಆದರೂ ಜನ ಮಾತ್ರ ಕೊರೊನಾ ಬಂದಾಗ ನೋಡೋಣ ಅಂತಾ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈಗ ಜನರು ಮೈ ಮರೆತರೆ ಕಂಟೇನ್ಮೆಂಟ್ ಝೋನ್ ಮೈಸೂರಿನಲ್ಲಿ ಹೆಚ್ಚಾಗಲಿವೆ.