ಮೈಸೂರು : ಕಳೆದ 2 ದಿನಗಳಿಂದ ಜಿಲ್ಲೆಯ ಪೊಲೀಸರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸುವ ಇಲಾಖೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.
ಕಳೆದ 2 ದಿನಗಳಿಂದ ಬೆಂಗಳೂರು ನಗರದ ಪಾದರಾಯನಪುರಕ್ಕೆ ಕರ್ತವ್ಯಕ್ಕೆ ಹೋಗಿದ್ದ ಕೆಎಸ್‌ಆರ್‌ಪಿ ಪೊಲೀಸರ ಜೊತೆಗೆ ಹಾಸನ, ಶಿವಮೊಗ್ಗ, ಬಿಜಾಪುರದಲ್ಲಿ ಕರ್ತವ್ಯಕ್ಕೆ ತೆರಳಿದ್ದ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ ಪಾದರಾಯನಪುರಕ್ಕೆ ತೆರಳಿದ್ದ 16 ಮಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಅವರುಗಳಿಗೂ ಈಗ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರ ಜೊತೆಗೆ ಬೇರೆ ಜಿಲ್ಲೆಗಳಿಗೂ ಕರ್ತವ್ಯಕ್ಕೆ ತೆರಳಿದ್ದ 75 ಮಂದಿ ಪೊಲೀಸರಿಗೂ ಕೊರೊನಾ ಪರೀಕ್ಷೆಗೊಳಪಡಿಸಲಾಗಿದೆ. ಅವರೆಲ್ಲರ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
2ನೇ ಹಂತದಲ್ಲಿ ವೇಗ ಪಡೆದುಕೊಳ್ಳುತ್ತಿರುವ ಸೋಂಕು : ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೊದಲ ಹಂತದಲ್ಲಿ ಜ್ಯುಬಿಲಿಯೆಂಟ್ ಕಾರ್ಖಾನೆಯಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿ ಕೋವಿಡ್ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಿಟ್ಟಿದ್ದ ಜಿಲ್ಲೆ ಸುಮಾರು 40 ದಿನಗಳ ಕಾಲದಲ್ಲಿ ಸಂಪೂರ್ಣ ಹತೋಟಿಗೆ ಬಂತು. ಆನಂತರ ಹತೋಟಿಯಲ್ಲಿದ್ದ ಸೋಂಕಿನ ಪ್ರಮಾಣ, ಲಾಕ್‌ಡೌನ್ ಸಡಿಲಿಕೆ ನಂತರ ಜಿಲ್ಲೆಗೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜಸ್ಥಾನದಿಂದ ಬಂದ ವ್ಯಕ್ತಿಗಳಿಂದ ಸೋಂಕು ಹರಡಿಕೆ ಹೆಚ್ಚಾಗಿ ಕಂಡು ಬಂದಿದೆ ಎಂದರು.
ಕಳೆದ 2 ದಿನಗಳಿಂದ ಪ್ರತಿದಿನ 22 ರಿಂದ 18 ಸೋಂಕಿತ ಪ್ರಕರಣ ಪತ್ತೆಯಾಗಿವೆ. ಅದರಲ್ಲಿ ಬೇರೆ ಕಡೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಸೋಂಕು ಬಂದಿದೆ. ಈಗ ಅವರ ಕುಟುಂಬಗಳು ಮತ್ತು ಜನರನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ಕೆಎಸ್‌ಆರ್‌ಪಿ ಸಿಬ್ಬಂದಿ ವಾಸವಿರುವ ವಸತಿ ಗೃಹಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಲ್ಲದೇ ಹೊರ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬಂದ ಪೊಲೀಸರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 169 ಜನರಿಗೆ ಸೋಂಕಿರುವುದು ಧೃಡಪಟ್ಟಿದೆ ಎಂದರು.
ಅದರಲ್ಲಿ 57 ಜನ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2ನೇ ಹಂತದಲ್ಲಿ ಕೊರೊನಾ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜೊತೆಗೆ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಸರ್ಕಾರ 30 ಖಾಸಗಿ ಆಸ್ಪತ್ರೆಗಳನ್ನು ಗುರುತಿಸುತ್ತಿದೆ ಎಂದು ತಿಳಿಸಿದರು.