ಮೈಸೂರು: ಬಿಜೆಪಿ ಪಕ್ಷ ನನಗೆ ಎಲ್ಲಾ ಅಧಿಕಾರ ನೀಡಿದೆ, ಸಚಿವ ಸ್ಥಾನದ ಯಾವುದೇ ಅಪೇಕ್ಷೆ ನನಗೆ ಇಲ್ಲ ಎಂದು ಶಾಸಕ ಎಸ್.ಎ ರಾಮದಾಸ್ ಹೇಳಿಕೆ ನೀಡಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಯಡಿಯೂರಪ್ಪನವರು ಕಠಿಣ ಸಂದರ್ಭದಲ್ಲಿ ಸಹ ರಾಜ್ಯವನ್ನು ಉತ್ತಮವಾಗಿ ಮುನ್ನೆಡಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರು.
ಸಚಿವ ಸ್ಥಾನ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವನದಲ್ಲಿ ಸಿದ್ಧಾಂತವನ್ನು ಇಟ್ಟುಕೊಂಡು ನಡೆಯುತ್ತಿರುವವನು ನಾನು, ಬಿಜೆಪಿ ಪಕ್ಷ ನನಗೆ ಎಲ್ಲಾ ಅಧಿಕಾರವನ್ನು ನೀಡಿದೆ, ಸಚಿವ ಸ್ಥಾನದ ಯಾವುದೇ ಅಪೇಕ್ಷೆ ನನಗಿಲ್ಲ, ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದರು.
ನಗರದ ಚಾಮುಂಡಿ ಬೆಟ್ಟದ ಬಳಿ ಇರುವ ಕುರುಬಾರಹಳ್ಳಿ ಸರ್ವೇ ನಂಬರ್ 4 ಸೇರಿದಂತೆ ಆಲನಹಳ್ಳಿ ಗ್ರಾಮದ ಸರ್ವೇ ನಂಬರ್ 41 ರಲ್ಲಿ ಇರುವ ಸಿದ್ದಾರ್ಥ ನಗರ, ಜೆ.ಸಿ.ಬಡಾವಣೆ, ಕೆ.ಸಿ. ಬಡಾವಣೆಗಾಗಿ ಭೂ ಸ್ವಾಧೀನ ಪಡಿಸಿದ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಿ ನಿನ್ನೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಇದೆ ಸಂದರ್ಭದಲ್ಲಿ ರಾಮದಾಸ್ ತಿಳಿಸಿದರು.