ಮೈಸೂರು: ನಾನು ಮಂತ್ರಿ ಮಾಡಿ ಎಂದು ಕೇಳುತ್ತಿದ್ದೇನೆಯೇ ವಿನ: ಡೆಪ್ಯುಟಿ ಚೀಫ್ ಮಿನಿಸ್ಟರ್ ಮಾಡಿ ಎಂದು ಕೇಳುತ್ತಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸುತ್ತೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಸುತ್ತೂರಿನ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಅತಿಥಿಯಾಗಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನನಗೆ ಚುನಾವಣೆಗೆ ನಿಲ್ಲುವುದು ಬೇಡ ಎಂದಿದ್ದರು. ಆದರೆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಗೆಲುವು ಸೋಲು ಬೇರೆ ವಿಚಾರ, ಕ್ಷೇತ್ರವನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಈಗ ಮಂತ್ರಿ ಮಾಡಿ ಅಂತ ಕೇಳುತ್ತಿದ್ದೇನೆಯೇ ಹೊರತು ಡೆಪ್ಯುಟಿ ಚೀಫ್ ಮಿನಿಸ್ಟರ್ (ಡಿಸಿಎಂ) ಮಾಡಿ ಎಂದು ಕೇಳುತ್ತಿಲ್ಲ ಎಂದರು.
ಸಚಿವ ಸಂಪುಟದಲ್ಲಿ ನಮಗೆ ಸ್ಥಾನವಿದೆ. ಸೋತಿದ್ದರೂ ಸವದಿಯವರನ್ನು ಡೆಪ್ಯುಟಿ ಚೀಫ್ ಮಿನಿಸ್ಟರ್ ಮಾಡಿದ್ದೀರಿ, ಕೇಂದ್ರದಲ್ಲಿ ಅರುಣ್ ಜೇಟ್ಲಿ ಚುನಾವಣೆಯಲ್ಲಿ ಸೋತರೂ ಸಹ ಅವರ ಹಿರಿತನಕ್ಕೆ ಮಣೆ ಹಾಕಿ ಸಚಿವ ಸ್ಥಾನ ನೀಡಿ ಅವರ ಅನುಭವವನ್ನು ಉಪಯೋಗಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲೂ ಸಹ ನಾನು ಸೋತರೂ ಹಿರಿತನ, ಅನುಭವನ್ನು ಬಳಕೆ ಮಾಡಿಕೊಳ್ಳಬೇಕು. ನಾನು ಸೋತಿದ್ದೇನೆ ಎಂದು ನನ್ನನ್ನು ಅವಕಾಶ ವಂಚಿತನಾಗಿ ಮಾಡಬಾರದು. ಈ ವಿಚಾರ ಯಡಿಯೂರಪ್ಪನವರಿಗೆ ಗೊತ್ತಿದೆ. ಮಾತುಕತೆ ಪ್ರಕಾರವೇ ನಡೆದುಕೊಳ್ಳಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಗರಂ ಆಗಿಯೇ ಹೇಳಿಕೆ ನೀಡಿದ್ದಾರೆ.