ಮೈಸೂರು: ಮಹಿಳಾ ಹೆಡ್ಕಾನ್ಸ್ಟೇಬಲ್ ಮನೆಯಲ್ಲಿ ಕಳ್ಳತನ ಮಾಡಿದ್ದ ಖದೀಮರನ್ನ ಬಂಧಿಸಿ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಲಿಂಗರಾಜು ಉರುಫ್ ಸೈಯದ್ ಶಾಹಿದ್ (38) ಹಾಗೂ ಸೈಯದ್ ನವಾಬ್ ಉರುಫ್ ರಾಜು (40) ಬಂಧಿತರು. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಪಾರ್ಕಿಂಗ್ ಲಾಟ್ ಕಂಟ್ರ್ಯಾಕ್ಟರ್ ವಿಜಯಕುಮಾರ್ ಹಾಗೂ ಪತ್ನಿ ಮಹಿಳಾ ಹೆಡ್ಕಾನ್ಸ್ಟೇಬಲ್ ವನಜಾಕ್ಷಿ ಅವರ ಸರಸ್ವತಿಪುರಂ ನಿವಾಸದಲ್ಲಿ ಸೆಪ್ಟೆಂಬರ್ 1 ರಂದು 75 ಲಕ್ಷ ರೂ. ಮೌಲ್ಯದ 1.439 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನವೆಂಬರ್ 1ರಂದು ಚಿನ್ನ ಮಾರುವಾಗ ಸಿಸಿಬಿ ಪೊಲೀಸರು ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಕಳ್ಳತನ ಮಾಡಿದ್ದ ವಿಚಾರ ಬರಳಕಿಗೆ ಬಂದಿದೆ.
ಕಳ್ಳರ ಪ್ರೇಮ್ ಕಹಾನಿ: ಬಂಧಿತ ಲಿಂಗರಾಜು ಸೈಯದ್ ನವಾಬ್ ತಂಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಸೈಯದ್ ಶಾಹಿದ್ ಎಂದು ಹೆಸರು ಬದಲಾಯಿಸಿಕೊಂಡಿದ್ದು. ಸೈಯದ್ ನವಾಬ್ ಸಹ ಮದುವೆಯಾದ ಬಳಿಕ ರಾಜು ಎಂದು ಹೆಸರು ಬದಲಾಯಿಸಿಕೊಂಡಿದ್ದ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನೆಲಮಂಗಲದ ನಿವಾಸಿಯಾದ ಲಿಂಗರಾಜು, ಆರೋಪಿ ಸೈಯದ್ ನವಾಬ್ ತಂದೆ ಬಳಿ ಕೆಲಸಕ್ಕೆ ಸೇರಿದ್ದ. ಸೈಯದ್ ನವಾಬ್ ತಂಗಿಯನ್ನು ಮದುವೆಯಾಗುವ ಸಲುವಾಗಿ ಲಿಂಗರಾಜು ತನ್ನ ಹೆಸರನ್ನು ಸೈಯದ್ ಶಾಹಿದ್ ಎಂದು ಬದಲಿಸಿಕೊಂಡ.
ಈ ಹಿಂದೆ ಜೈಲು ಸೇರಿದ್ದ ಲಿಂಗರಾಜು: ಈ ಹಿಂದೆಯೂ ಲಿಂಗರಾಜು 22 ಮನೆಗಳ್ಳತನ ಮಾಡಿದ್ದು, ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ, ಬಳಿಕ ಮತ್ತೆ ಕಳ್ಳತನ ಆರಂಭಿಸಿದ್ದ. ಸೈಯದ್ ನವಾಬ್ ಮೇಲೆ 28 ಪ್ರಕರಣಗಳಿವೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.