ಮೈಸೂರು: ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ಅವರಿಗೆ ಬೆಂಬಲ ನೀಡುವ ಬಗ್ಗೆ ಹೈ ಕಮಾಂಡ್ ತೀರ್ಮಾನಿಸುತ್ತದೆ. ಹೈ ಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಇಂದು ತಮ್ಮ ಮೈಸೂರಿನ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಖರ್ಗೆ ಅಭ್ಯರ್ಥಿಯಾಗುತ್ತಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಸಹ ಒಪ್ಪಿಗೆ ನೀಡಿದ್ದಾರೆ. ಜೆಡಿಎಸ್ನಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಕಾಂಗ್ರೆಸ್ ಬೆಂಬಲ ನೀಡುವ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ. ಈ ವಿಷಯದ ಬಗ್ಗೆ ಚರ್ಚೆಯೂ ಆಗಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಆ ತೀರ್ಮಾನಕ್ಕೆ ನಾವು ಬದ್ಧ ಎಂದು ಸಿದ್ದರಾಮಯ್ಯ ಹೇಳಿದರು.
ಮೂರು ತಿಂಗಳು ಶಾಲೆ ತೆರೆಯಬೇಡಿ: ಕೋವಿಡ್ ಇನ್ನು ಸಂಪೂರ್ಣವಾಗಿ ಹೋಗಿಲ್ಲ. ಸರ್ಕಾರ ಶಾಲೆ ತೆರೆಯಲು ಅವಸರ ಮಾಡುತ್ತಿದೆ. ಅಕ್ಟೋಬರ್ವರೆಗೆ ಅಂದರೆ, ಇನ್ನು ಮೂರು ತಿಂಗಳು ಶಾಲೆ ತೆರೆಯುವುದು ಬೇಡ. ಏಕೆಂದರೆ ಶಾಲೆ ತೆರೆದರೆ ಅಪಾಯ ಆಗುತ್ತದೆ. ಈ ವಿಚಾರದಲ್ಲಿ ಶಿಕ್ಷಣ ಸಚಿವರು ಯೋಚಿಸಬೇಕು ಎಂದ ಸಿದ್ದರಾಮಯ್ಯ ಸಲಹೆ ನೀಡಿದರು.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಬೋಗಸ್ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.