ಮೈಸೂರು: ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಆವರಿಸಿದೆ. ಅಲ್ಲದೆ ಪಕ್ಕದ ಕೇರಳ ರಾಜ್ಯದಲ್ಲೂ ದಿನೇ ದಿನೆ ಸೋಂಕು ಭಾದಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ನಗರದ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಅರಮನೆ, ಮೃಗಾಲಯ, ವಿಮಾನ ನಿಲ್ದಾಣ, ಚಾಮುಂಡಿ ಬೆಟ್ಟ, ರೈಲ್ವೆ ನಿಲ್ದಾಣಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇರಿಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಯ ಇರುವ ಪ್ರವಾಸಿಗರನ್ನು ತಪಾಸಣೆ ಮಾಡಲು ಪ್ರವಾಸಿ ತಾಣಗಳಲ್ಲಿ ವೈದ್ಯರ ತಂಡ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಮತ್ತು ಕೊಡಗು ಜಿಲ್ಲೆ ಕೇರಳ ಗಡಿ ಭಾಗವಾಗಿರುದರಿಂದ ಈ ಭಾಗದಲ್ಲಿ ಹೈ ಅಲರ್ಟ್ ಘೋಷಿಸಿ, ಎಚ್ಚರಿಕೆ ವಹಿಸಲಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ನಿಗದಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.