ಮೈಸೂರು: ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ನಗರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಉಗ್ರರು ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆ ಪೋಲಿಸರು ವ್ಯಾಪಕ ತಪಾಸಣೆ ಹಾಗೂ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.
ನಗರದ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಸೆಂಟ್ ಫಿಲೋಮಿನಾ ಚರ್ಚ್, ಸಿಎಫ್ಟಿಆರ್ಐ, ಡಿಎಫ್ಆರ್ಎಲ್, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಶಸ್ತ್ರಾಸ್ತ್ರ ಮೀಸಲು ಪಡೆಯನ್ನು ಸಹ ನೇಮಿಸಲಾಗಿದೆ.
ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಇದೇ ರೀತಿ ಕಟ್ಟೆಚ್ಚರವನ್ನು ಮುಂದುವರೆಸಲಾಗುವುದು ಎಂದು ಎಸಿಪಿ ಮುತ್ತುರಾಜು ತಿಳಿಸಿದರು.