ಮೈಸೂರು: ಅಖಿಲ ಭಾರತ ಜಾನಪದ-ಬುಡಕಟ್ಟು ಕಲಾ ಉತ್ಸವ ಹಾಗೂ ವಿಚಾರ ಸಂಕಿರಣಕ್ಕೆ ಪಾರಂಪರಿಕ ಗಿಡಮೂಲಿಕೆ ಔಷಧಿ ತಜ್ಞೆ ಮಾಸ್ತಮ್ಮ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತು, ಕರ್ನಾಟಕ ಸಾಹಸ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ಮುಕ್ತ ವಿಶ್ವವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಅಖಿಲ ಭಾರತ ಜಾನಪದ-ಬುಡಕಟ್ಟು ಕಲಾ ಉತ್ಸವ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಹಲವಾರು ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ್ದ ತಂಡಗಳು ವಿವಿಧ ನೃತ್ಯ ಪ್ರಕಾರಗಳನ್ನು ಮಾಡಿ ನೋಡುಗರ ಮನಸೂರೆಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಿಡಮೂಲಿಕೆ ಔಷಧಿ ತಜ್ಞೆ ಮಾಸ್ತಮ್ಮ, ನಮ್ಮನ್ನೆಲ್ಲ ಕಾಡಿನಿಂದ ಹೊರ ಹಾಕಲಾಗಿದೆ. ಆದರೆ, ನಮಗೆ ಕಾಡು ಜೀವನ. ಕಾಡಿನಲ್ಲಿದ್ದಾಗ ನಮ್ಮ ಜನಕ್ಕೆ ರೋಗಗಳೇ ಬರುತ್ತಿರಲಿಲ್ಲ. ಆದರೆ, ಈಗ ಕಾಡಿನಿಂದ ಹೊರಬಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೋಗಗಳಿಂದ ಬಳಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಕಾರ್ಯವೈಖರಿ, ಸಲ್ಲಿಸಿರುವ ಸೇವೆ ಕುರಿತು ಮಾತನಾಡಿದ ಅವರು, ನಮ್ಮ ತಾಯಿಯಿಂದ ಹೆರಿಗೆ ಮಾಡುವುದನ್ನು ಕಲಿತೆ. ಈವರೆಗೂ 2500 ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದೇನೆ. ಯಾವುದೇ ಬಾಣಂತಿಯಾಗಲಿ ಅಥವಾ ಮಗುವಾಗಲಿ ಸಾವನ್ನಪ್ಪಿಲ್ಲ. ಹೀಗಾಗಿ ನನಗೆ ನನ್ನ ಕೆಲಸದಲ್ಲಿ ತೃಪ್ತಿ ಇದೆ ಎಂದರು. ನನ್ನ ಕೆಲಸ ತಿಳಿದ ಅಂಬರೀಶ್ ಅವರು ನನ್ನನ್ನು ಮಂಡ್ಯಕ್ಕೆ ಕರೆದು ಸನ್ಮಾನ ಮಾಡಿಸಿದ್ದರು ಎಂದು ಇದೇ ವೇಳೆ ಸ್ಮರಿಸಿಕೊಂಡರು.