ಮೈಸೂರು: ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಜಲಾವೃತವಾಗಿದ್ದ ಮನೆಯಲ್ಲಿ ಸಿಲುಕಿದ್ದ ಕುಟುಂಬಸ್ಥರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಹುಲ್ಲಹಳ್ಳಿ ಗ್ರಾಮದ ಕಂಬದ್ ಕೊಲ್ಲಿ ಶನಿ ಮಹಾತ್ಮ ದೇವಾಲಯದ ಬಳಿ ಇರುವ ಬಸವರಾಜು ಗೌಡ ಎಂಬುವವರ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಯ ಸುತ್ತಲೂ ನೀರು ತುಂಬಿಕೊಂಡು ಕುಟುಂಬಸ್ಥರು ಹೊರಬರಲಾರದೆ ಪರದಾಡುತ್ತಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿದ್ದಾರೆ.
ಇನ್ನು, ಮಳೆ ನೀರು ರಸ್ತೆಯಲ್ಲಿ ಹರಿದಾಡುತ್ತಿರುವುದರಿಂದ ನಂಜನಗೂಡು ಹುಲ್ಲಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೆಚ್ಚಾಗಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಹಾಗಾಗಿ ಸರ್ಕಾರ ಶಾಶ್ವತ ಪರಿಹಾರವನ್ನು ಕಂಡುಕೊಂಡು ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತುಮಕೂರಲ್ಲಿ ಭಾರಿ ಮಳೆ: ಹಳ್ಳದಲ್ಲಿ ಕೊಚ್ಚಿ ಹೋದ ಮೂವರು, ಓರ್ವನ ಶವ ಪತ್ತೆ!