ಮೈಸೂರು: ನಿನ್ನೆ ರಾತ್ರಿ ನಗರದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿವಿಧೆಡೆ ಮರಗಳು ಧರೆಗುರುಳಿದ್ದು , ಭಾರೀ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದು, ಜಖಂ ಆಗಿರುವ ಘಟನೆ ಕುವೆಂಪುನಗರದ ವಾಟರ್ ಟ್ಯಾಂಕ್ ಬಳಿ ನಡೆದಿದೆ.
ಜೆಎಲ್ಬಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದರೆ, ಕುವೆಂಪುನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಕಾರು ಜಖಂ ಆಗಿದೆ. ಅಲ್ಲದೇ ಸರ್ ಮಿರ್ಜಾ ರಸ್ತೆಯಲ್ಲಿ ಅನೇಕ ಮರಗಳು ಉರುಳಿ ಬಿದ್ದಿದೆ.
ಹುಣಸೂರು ಪಟ್ಟಣ ಹಾಗೂ ಗಾವಡಗೆರೆಯಲ್ಲಿ 30ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ಮಳೆಯಿಂದ ಹಲವೆಡೆ ಬೆಳೆ ಹಾನಿಯಾಗಿದೆ. ಮಳೆ ಅವಾಂತರ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.