ಮೈಸೂರು: ಎನ್.ಆರ್. ಕ್ಷೇತ್ರ ಬಿಟ್ಟರೆ ಚಾಮರಾಜ ಕ್ಷೇತ್ರದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ 409 ಕ್ಕೇರಿರುವುದರಿಂದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎಲ್. ನಾಗೇಂದ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಲದರ್ಶಿನಿ ಅತಿಥಿ ಗೃಹದಲ್ಲಿ ಚಾಮರಾಜ ಕ್ಷೇತ್ರದ ಕೋವಿಡ್- 19 ಟಾಸ್ಕ್ ಫೋಸ್೯ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮಂಡಿ ಮೊಹಲ್ಲ, ತಿಲಕ್ ನಗರ, ಜೆ.ಕೆ ಟೈಯರ್ಸ್ ಫ್ಯಾಕ್ಟರಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ವರದಿಯಾಗುತ್ತಿದ್ದು, ಈ ಪ್ರದೇಶಗಳಲ್ಲಿ ರ್ಯಾಪಿಡ್ ಟೆಸ್ಟಿಂಗ್ ಗೆ ಅಗತ್ಯ ಕಿಟ್ ಗಳನ್ನು ನೀಡುವಂತೆ ಡಿ.ಹೆಚ್.ಓ ರವರಿಗೆ ಸೂಚಿಸಿದರು.
ಚಾಮರಾಜ ಕ್ಷೇತ್ರದಲ್ಲಿ 200 ಹಾಸಿಗೆಯಿಡುವಷ್ಟು ಜಾಗವಿರುವ ಕಟ್ಟಡವೊಂದನ್ನು ಗುರುತಿಸಿ ಅಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಕಾರ್ಯ ಪ್ರವೃತ್ತರಾಗಬೇಕು. ಜೆ.ಕೆ. ಟೈಯರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೂ ತಪಾಸಣೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಖಾತರಿಪಡಿಸಿಕೊಳ್ಳಲು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ, ನೋಡಲ್ ಅಧಿಕಾರಿಗಳು, ವಲಯ ಆಯುಕ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
409 ಸೋಂಕಿತರುಗಳಿಗೆ ನೀಡುತ್ತಿರುವ ಚಿಕಿತ್ಸೆ, ಅವರಲ್ಲಿ ಆಸ್ಪತ್ರೆಗೆ ದಾಖಲಿಸಿರುವವರ ಸಂಖ್ಯೆ, ಮನೆಯಲ್ಲಿ ಕ್ವಾರಂಟೈನ್ ಮಾಡಿರುವವರ ಸಂಖ್ಯೆ, ಸೋಂಕಿತರ ಮನೆಯವರನ್ನೂ ಸ್ವಾಬ್ ಟೆಸ್ಟ್ ಗೆ ಒಳಪಡಿಸುವಿಕೆ, ಸೋಂಕಿತರ ಮನೆಗಳು ಹಾಗೂ ಅಕ್ಕ-ಪಕ್ಕದಲ್ಲಿ ಕೂಡಲೇ ಸ್ಯಾನಿಟೈಸ್ ಮಾಡಲು ಅಗತ್ಯ ಔಷಧ ರಾಸಾಯನಿಕ, ವಾಹನ, ಸಿಬ್ಬಂದಿಯನ್ನು ಸಜ್ಜುಗೊಳಿಸಿಡುವಂತೆ ಸೂಚಿಸಿದರು.
ಪ್ರತಿ ದಿನ ಚಾಮರಾಜ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾಗುವವರ ವಿವರಗಳನ್ನು ನನಗೆ ತಲುಪಿಸಬೇಕು. ಸೋಂಕು ದೃಢಪಟ್ಟವರನ್ನು ತಡಮಾಡದೆ ಕೂಡಲೇ ಸಂಬಂಧಿಸಿದ ಆಸ್ಪತ್ರೆಗೆ ಸಾಗಿಸುವ ಕೆಲಸವಾಗಬೇಕು ಎಂದರು. ಸದ್ಯ ಚಾಮರಾಜ ಕ್ಷೇತ್ರಕ್ಕೆ 2 ಆಂಬುಲೆನ್ಸ್ ಗಳನ್ನು ಮಾತ್ರ ನೀಡಿದ್ದು, ವಲಯವಾರು ಆಂಬುಲೆನ್ಸ್ ಗಳನ್ನು ಪಡೆಯಲು ಹಾಗೂ ಪರೀಕ್ಷೆಗೆ ಕರೆದುಕೊಂಡು ಹೋಗಲು ವಲಯವಾರು 3 ವಾಹನಗಳನ್ನು ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.