ಮೈಸೂರು : 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಹೋರಾಟ. ನಾನು ಅಧಿಕಾರ ಅನುಭವಿಸಲು ಅಥವಾ ಮುಖ್ಯಮಂತ್ರಿ ಆಗಲೂ ಅಲ್ಲ. ಜನರ ಕಷ್ಟಗಳನ್ನು ಬಗೆಹರಿಸಲು ಹೋರಾಟ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಬೆಳವಾಡಿಯಲ್ಲಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ನಾನು ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡುತ್ತೇನೆ. ನನ್ನ ಐದು ಯೋಜನೆ ಮೂಲಕ ಜನರ ಕಷ್ಟಗಳನ್ನು ಬಗೆಹರಿಸುತ್ತೇನೆ ಎಂದರು.
ಜಿಟಿಡಿ ಕಾಲೆಳೆದ ಹೆಚ್‌ಡಿಕೆ : ನಾನಾಗಲಿ ದೇವೇಗೌಡರಾಗಲಿ ಯಾರೂ ಅನ್ಯಾಯ ಮಾಡಿಲ್ಲ. ದೇವೇಗೌಡರು ಎಂದ್ರೆ ಈ ಚಿಕ್ಕ ದೇವೇಗೌಡರು ಅಲ್ಲ, ದೊಡ್ಡದೇವೇಗೌಡರು. ನಮ್ಮ ಪಕ್ಷದಲ್ಲಿ ಇದ್ದು ಬೆಳೆದು ಈಗ ಪಕ್ಷ ಸರ್ವನಾಶ ಆಗುತ್ತೆ ಎನ್ನುತ್ತಾರೆ. ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಜಿಟಿಡಿಗೆ ಕುಟುಕಿದರು.
ರಾಜ್ಯ ಪ್ರವಾಸ : ಜನವರಿಯಿಂದ ರಾಜ್ಯ ಪ್ರವಾಸ ಮಾಡ್ತೀನಿ. ರಾಜ್ಯದ ಎಲ್ಲಾ ಹಳ್ಳಿಗಳಿಗೂ ಹೋಗುತ್ತೇನೆ. ನನ್ನ ಪಂಚರತ್ನ ಯೋಜನೆಗಳ ಬಗ್ಗೆ ತಿಳಿ ಹೇಳುತ್ತೇನೆ. ಮನೆಗೆ ಒಬ್ಬರಿಗೆ ಉದ್ಯೋಗ, ಎಲ್ಲರಿಗೂ ಸೂರು, ಉಚಿತ ಉತ್ತಮ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ, ರೈತರು ಸುಸ್ಥಿರ ಜೀವನ ಕಟ್ಟಿಕೊಳ್ಳುವ ನನ್ನ ಯೋಜನೆಗಳ ಮುಖ್ಯ ಅಂಶ ಎಂದರು.
ಅವಕಾಶ ನೀಡಿ : ಐದು ವರ್ಷದ ಬಿಜೆಪಿ-ಕಾಂಗ್ರೆಸ್ ಸರ್ಕಾರವನ್ನು ನೀವು ನೋಡಿದ್ದೀರಿ. ದುಡ್ಡು ಹೊಡೆದು, ಚುನಾವಣೆಯ ವೇಳೆ ಹಣ ಕೊಟ್ಟು ವೋಟು ಹಾಕಿಸಿಕೊಳ್ಳುತ್ತಾರೆ. ಈಗ ಪೆಟ್ರೋಲ್ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ನನಗೂ ಅವಕಾಶ ನೀಡಿ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡಿ. ನಾನು ನನ್ನ ಐದು ಯೋಜನೆ ಕೊಡಲಿಲ್ಲ ಅಂದರೆ ಯಾವತ್ತು ನನಗೆ ಮತ ನೀಡಿ ಎಂದು ಕೇಳುವುದಿಲ್ಲ ಎಂದು ತಿಳಿಸಿದರು.
ಮತ ಹಾಕುವಾಗ ರೈತರು ನನ್ನ ಮರಿತಾರೆ : ನನಗಿದ್ದ ಹಲವು ಹಿಂಸೆಯೊಳಗೂ ರೈತರ ಸಾಲ ಮನ್ನಾ ಮಾಡಿದೆ. ಹಾನಗಲ್ ರೈತರು ಫೋನ್ ಮಾಡಿ ನನ್ನ ಕುಟುಂಬದವರಿಗೆ ₹10 ಲಕ್ಷ ಸಾಲ ಮನ್ನವಾಗಿದೆ. ಇದೇ ಹಣದಲ್ಲಿ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶಕ್ಕೆ ಬನ್ನಿ ಅಂತಾ ಫೋನ್ ಮಾಡ್ತಾರೆ. ಆದ್ರೆ, ವೋಟ್ ಹಾಕಬೇಕಾದರೆ ರೈತರು ನನ್ನನ್ನು ಮರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡನ ಮನವಿ : ಮುಂದಿನ ಚುನಾವಣೆಯಲ್ಲಿ ಜಿ.ಡಿ.ದೇವೇಗೌಡ ಜೆಡಿಎಸ್‌ನಿಂದಲೇ ಸ್ಪರ್ಧಿಸಿದರೂ ಸೋಲುತ್ತಾರೆ. ಬೆನ್ನಿಗೆ ಚೂರಿ ಹಾಕುವ ಅವರನ್ನು ನಾವು ನಂಬೋದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿ ಎಂದು ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರು ಹೆಚ್ಡಿಕೆಗೆ ಮನವಿ ಮಾಡಿದರು.