ಈಗಾಗಲೇ 50 ದಿನಗಳನ್ನು ಪೂರೈಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಸದ್ಯ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಮನೆಯ ಕ್ಯಾಪ್ಟನ್ ಉಗ್ರಂ ಮಂಜು ಈ ಸಾಮ್ರಾಜ್ಯದ ಅಧಿಪತಿ. ಅರಮನೆ, ರಾಜ, ಪ್ರಜೆಗಳು ಇದೇ ಕಾನ್ಸೆಪ್ಟ್ ಮೇಲೆ ಟಾಸ್ಕ್ಗಳು ನಡೆಯುತ್ತಿವೆ. ನಾಮಿನೇಷನ್ ಪ್ರಕ್ರಿಯೆಯೂ ಈ ಬಾರಿ ಕೊಂಚ ವಿಭಿನ್ನವಾಗಿ ನಡೆಯಿತು. ಅಷ್ಟೇ ಅಲ್ಲದೇ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿ, ಮೋಕ್ಷಿತಾ ಅವರನ್ನು ಯುವರಾಣಿ ಎಂದು ಘೋಷಿಸಿದ್ದಾರೆ. ಅದರಂತೆ ತಮ್ಮ ಸ್ಥಾನಕ್ಕಾಗಿ ಎರಡು ತಂಡಗಳು ಹೋರಾಡಬೇಕಿದೆ.
'ಅಸ್ತ್ರ ಮಣ್ಣಿನದೇ ಆದ್ರೂ ಬಲಿ ಪಡೆಯದೇ ಇರುತ್ತಾ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದ್ದು ಉಗ್ರಂ ಮಂಜು ಮತ್ತು ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಮಂಜು vs ರಜತ್ ಅವರ ಗಂಭೀರ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕಿದೆ. ಸಂಪೂರ್ಣ ಸಂಚಿಕೆಗೆ ಪ್ರೇಕ್ಷಕರು ಕಾತರರಾಗಿದ್ದಾರೆ.
ಎರಡು ಬಣಗಳಿಗೆ ಈ ವಾರದ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಅದುವೇ ಮಣ್ಣಿನ ಅಸ್ತ್ರ. ಸ್ಪರ್ಧಿಗಳು ಮಣ್ಣಿನಿಂದ ಅಸ್ತ್ರ ಮಾಡುತ್ತಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆದಿದೆ. ರಜತ್ ಪ್ರತಿಕ್ರಿಯಿಸಿ ಯಾರಾದ್ರು ತಳ್ಳಿದ್ರೆ ಮಾತ್ರ ನಾನೂ ಕೂಡಾ ಸರಿಯಾಗೇ ತಳ್ಳುತ್ತೇನೆ. ಬುರುಡೆ ಒಡೆದು ಹೋಗಬೇಕು. ಆ ರೀತಿ ತಳ್ಳುತ್ತೇನೆ ನೋಡಿ ಎಂದಿದ್ದಾರೆ. ಇದೇನು ಮಾತು ಎಂದು ಮಂಜು ವಾದಕ್ಕಿಳಿದಿದ್ದಾರೆ. ರೌಡಿಯಂತೆ ಮಾತನಾಡುತ್ತಿದ್ದೀರಿ ಎಂದು ತಿಳಿಸಿದ್ದಾರೆ. ಬೆದರಿಕೆ ಇಡೋದಲ್ಲ, ಆಟಕ್ಕಿಳಿಯಬೇಕಿತ್ತು ತೋರಿಸ್ತಾ ಇದ್ದೆ ಅಂತಾ ಮಂಜು ತಿಳಿಸಿದ್ದಾರೆ.
ಇದನ್ನೂ ಓದಿ: ಯುವ ರಾಜ್ಕುಮಾರ್ 'ಎಕ್ಕ' ಚಿತ್ರದ ಟೈಟಲ್ ಸಿಕ್ಕಿದ್ದು ಎಲ್ಲಿಂದ ಗೊತ್ತಾ?
ನಂತರ ಆಟ ಮುಗಿದ ಮೇಲೂ, 54-55 ದಿನ ಭಯ ಪಟ್ಟು ಇದ್ದಿದ್ದಲ್ಲ. ನಿನ್ ಆಟ ನೀನ್ ತೋರ್ಸು, ನನ್ ಆಟ ನಾನ್ ತೋರಿಸ್ತೀನಿ ಎಂದು ಮಂಜು ಗುಟುರು ಹಾಕಿದ್ದಾರೆ. ಆಗಿಂದು ಒಂದ್ ಲೆಕ್ಕ, ಈಗಿಂದು ಒಂದ್ ಲೆಕ್ಕ ಅಂತಾ ರಜತ್ ಹೇಳಿದ್ದಾರೆ. ಹೀಗೆ ವಾದ ವಿವಾದಗಳು ದೊಡ್ಡ ಮಟ್ಟದಲ್ಲೇ ನಡೆದಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ವೀಕ್ಷಕರು ಕಾತರರಾಗಿದ್ದಾರೆ.
ಇದನ್ನೂ ಓದಿ: ಡಾಲಿ ಧನಂಜಯ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ನುಡಿದ ಭವಿಷ್ಯ ನಿಜವಾಗುತ್ತಾ?: ಏನದು ಆ ಮಾತು?
ಇನ್ನು, ಕಾರ್ಯಕ್ರಮದ ಆರಂಭದಲ್ಲಿ ಮಂಜು, ಗೌತಮಿ, ಮೋಕ್ಷಿತಾ ಅವರು ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಆದ್ರೀಗ ಮೋಕ್ಷಿತಾ ಈ ಗುಂಪಿನಿಂದ ಹೊರ ಬಂದಿದ್ದಾರೆ. ಇದೀಗ ಆಟದಲ್ಲಿ ಮಂಜು ವಿರುದ್ಧ ಮೋಕ್ಷಿತಾ ಸೆಣಸಾಡುತ್ತಿದ್ದಾರೆ. ಎರಡು ಗುಂಪುಗಳಾಗಿ ಆಟ ಮುಂದುವರಿದಿದ್ದು, ಮಂಜು ಮತ್ತು ಮೋಕ್ಷಿತಾ ನಡುವಿನ ಮನಸ್ತಾಪ ಹೆಚ್ಚಾಗುವ ಸಾಧ್ಯತೆಗಳಿವೆ.